ಕಾಶಿ ಉಭಯ ಜಗದ್ಗುರುಗಳ ಅನುಷ್ಠಾನ ಮಂಗಲ; ಸಂಪೂರ್ಣ ಕಾಣಿಕೆ ವಿದ್ಯಾರ್ಥಿ ವೇತನ ನಿಧಿಗೆ ಅರ್ಪಣೆ

kashi2
Published on

ಪುಣೆ: ಕಾಶಿ ಪೀಠದ ಉಭಯ ಜಗದ್ಗುರುಗಳ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಒಂದು ತಿಂಗಳ ತಪೋನುಷ್ಠಾನ ಮತ್ತು ಇಷ್ಟಲಿಂಗ ಮಹಾಪೂಜೆಯ ಮಂಗಲ ಕಾರ್ಯಕ್ರಮವು ಮಹಾರಾಷ್ಟ್ರದ ಪುಣೆ ನಗರದಲ್ಲಿ ಅದ್ಧೂರಿಯಾಗಿ ನಡೆಯಿತು.

ಪ್ರತಿ ವರ್ಷದ ಪದ್ಧತಿಯಂತೆ, ಕಾಶಿ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಪುಣೆಯ ಚಿಂಚವಾಡ ಶಾಖಾ ಮಠದಲ್ಲಿ ಶ್ರಾವಣ ಮಾಸದ ಅನುಷ್ಠಾನ ಕೈಗೊಂಡಿದ್ದರು. ಕಿರಿಯ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸೊಲ್ಲಾಪುರದ ಸಿದ್ಧರಾಮೇಶ್ವರ ದೇವಾಲಯದ ಆವರಣದಲ್ಲಿ ಅನುಷ್ಠಾನ ಕೈಗೊಂಡಿದ್ದರು. ಉಭಯ ಜಗದ್ಗುರುಗಳ ಅನುಷ್ಠಾನ ಮಂಗಲವು ಪುಣೆಯ ಚಿಂಚವಾಡದಲ್ಲಿ ನಡೆಯಿತು.

ಸಮಾರಂಭಕ್ಕೂ ಮುನ್ನ ನೂತನ ಜಗದ್ಗುರುಗಳನ್ನು ಅಡ್ಡಪಲ್ಲಕ್ಕಿ ಮಹೋತ್ಸವದೊಂದಿಗೆ ಪುರಪ್ರವೇಶಕ್ಕೆ ಸ್ವಾಗತ ಮಾಡಲಾಯಿತು. ನಂತರ ಉಭಯ ಜಗದ್ಗುರುಗಳ ಸಾನಿಧ್ಯದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಸೇರಿದಂತೆ ವಿವಿಧ ಪ್ರಾಂತ್ಯದ 20ಕ್ಕೂ ಹೆಚ್ಚು ಶಿವಾಚಾರ್ಯರ ನೇತೃತ್ವದಲ್ಲಿ ಮಂಗಲ ಸಮಾರಂಭ ನಡೆಯಿತು.

ಕಾಶಿ ಜಗದ್ಗುರುಗಳು ಪ್ರತಿವರ್ಷ ನಡೆಸಿಕೊಂಡು ಬಂದ ಪದ್ಧತಿಯಂತೆ, ಈ ವರ್ಷವೂ ಶ್ರಾವಣ ಮಾಸದಲ್ಲಿ ತಮಗೆ ಬಂದ ಪಾದ ಕಾಣಿಕೆಯ ಒಟ್ಟು 16 ಲಕ್ಷ ರೂಪಾಯಿಗಳನ್ನು ಆ ಭಾಗದ ಬಡ ವಿದ್ಯಾರ್ಥಿಗಳ ಮಾಸಿಕ ವಿದ್ಯಾರ್ಥಿ ವೇತನಾ ನಿಧಿಗೆ ನೀಡಿ ಸಾಮಾಜಿಕ ಮತ್ತು ಶೈಕ್ಷಣಿಕ ಕಳಕಳಿ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net