ಶಾಸ್ತ್ರೀಯ ನೃತ್ಯದಿಂದ ಡಿಸ್ಟರ್ಬ್​ ಆಗ್ತಿದೆಯೆಂದು ಅರ್ಧಕ್ಕೆ ನಿಲ್ಲಿಸಿದ ನ್ಯಾಯಾಧೀಶ ಪಾಷಾ! ಖ್ಯಾತ ಕಲಾವಿದೆಯ ಕಣ್ಣೀರು

dance
Published on

ಕೊಚ್ಚಿ: ಮೋಹಿನಿಯಾಟ್ಟಂನ ಖ್ಯಾತ ನೃತ್ಯಪಟು ಡಾ.ನೀನಾ ಪ್ರಸಾದ್​ ಅವರ ಜೀವನದಲ್ಲಿ ಹಿಂದೆಂದೂ ಆಗದಂಥ ಕಹಿ ಘಟನೆ ನಡೆದಿದ್ದು, ಈ ನಟಿ ಕಣ್ಣೀರು ಹಾಕಿದ್ದಾರೆ.

ಆಗಿದ್ದೇನೆಂದರೆ, ಕೇರಳದ ಸರ್ಕಾರಿ ಮೋಯನ್ ಎಲ್‌ಪಿ ಶಾಲೆಯಲ್ಲಿ ಡಾ.ನೀನಾ ಪ್ರಸಾದ್​ ನೃತ್ಯ ಕಾರ್ಯಕ್ರಮ ನಡೆಯುತ್ತಿತ್ತು. ಈ ಶಾಲೆಯ ಹಿಂಭಾಗದಲ್ಲಿ ಜಿಲ್ಲಾ ನ್ಯಾಯಾಧೀಶ ಡಾ.ಕಲಾಂ ಪಾಷಾ ಅವರ ಮನೆಯಿದೆ. ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಪೊಲೀಸರನ್ನು ಕರೆಸಿರುವ ನ್ಯಾಯಾಧೀಶ ಪಾಷಾ ಅವರು, ಕಾರ್ಯಕ್ರಮವನ್ನು ನಿಲ್ಲಿಸುವಂತೆ ಹೇಳಿದ್ದಾರೆ. ರಂಗಮಂದಿರಕ್ಕೆ ನುಗ್ಗಿದ ಪೊಲೀಸರು ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಇದರಿಂದ ಆಘಾತಗೊಂಡ ಕಲಾವಿದೆ ಹಾಗೂ ಅಲ್ಲಿ ನೆರೆದಿದ್ದ ಜನರು, ಕಾರಣ ಕೇಳಿದಾಗ ಪೊಲೀಸರು ವಿವರಿಸಿದ್ದಾರೆ.

ಈ ಬಗ್ಗೆ ಕಲಾವಿದೆ ಡಾ.ನೀನಾ ಪ್ರಸಾದ್​ ಫೇಸ್​​ಬುಕ್​ನಲ್ಲಿ ಅಳಲು ತೋಡಿಕೊಂಡಿದ್ದಾರೆ. ನನಗೆ ದುಃಖ ಮಡುಗಟ್ಟಿದೆ, ಕಣ್ಣೀರು ನಿಲ್ಲುತ್ತಿಲ್ಲ.. ನನ್ನ ಮೋಹಿನಿಯಾಟ್ಟಂ ಪ್ರದರ್ಶನವನ್ನು ಮಧ್ಯದಲ್ಲೇ ನಿಲ್ಲಿಸುವಂತೆ ಹೇಳುವುದು ನನಗೆ ಮಾಡಿದ ಅವಮಾನ ಮಾತ್ರವಲ್ಲ, ಇದು ಕೇರಳದ ಕಲೆ ಮತ್ತು ಸಂಸ್ಕೃತಿಗೆ ಮಾಡಿದ ಅವಮಾನ ಎಂದಿದ್ದಾರೆ.

ಅರ್ಜುನ ಮತ್ತು ಕೃಷ್ಣನ ನಿಕಟ ಬಾಂಧವ್ಯದ ಕುರಿತು ಹೇಳುವ 'ಸಖ್ಯಮ್' (ಸ್ನೇಹ) ಎಂಬ ವಿಷಯಾಧಾರಿತ ನೃತ್ಯ ಮಾಡುತ್ತಿದ್ದೆ. ಇದು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ನೃತ್ಯ. 40 ನಿಮಿಷಗಳ ನಂತರ ಪೊಲೀಸರು ಪ್ರವೇಶಿಸಿದರು. ಆಯೋಜಕರು ಪ್ರದರ್ಶನ ನಿಲ್ಲಿಸುವಂತೆ ವಿನಂತಿಸಿದರು. ಕಾರ್ಯಕ್ರಮದ ಸಂಗೀತ ಜೋರಾಗಿ ನಡೆದಿದೆ ಎಂದು ಪೊಲೀಸರಿಗೆ ನ್ಯಾಯಾಧೀಶರು ದೂರು ನೀಡಿದ್ದರಂತೆ. ಶಾಸ್ತ್ರೀಯ ನೃತ್ಯದಲ್ಲಿ ಸಂಗೀತ ಯಾವತ್ತೂ ಜೋರಾಗಿ ಇರುವುದಿಲ್ಲ. ಅಷ್ಟೇ ಅಲ್ಲದೇ, ನನ್ನದು ಏಕವ್ಯಕ್ತಿ ಪ್ರದರ್ಶನವಾಗಿದ್ದು, ಪಿಟೀಲು, ಮೃದಂಗದಂತಹ ಮೃದುವಾದ ಸಂಗೀತ ವಾದ್ಯಗಳನ್ನು ಬಳಸಲಾಗಿತ್ತು. ಆದರೆ ಜೋರಾದ ಸಂಗೀತ ಎಂದು ಹೇಳಿ ನೃತ್ಯ ನಿಲ್ಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಂದಹಾಗೆ ಈ ನ್ಯಾಯಮೂರ್ತಿ ಕಲಾಂ ಪಾಷಾ ಈ ಹಿಂದೆಯೂ ವಿವಾದದಲ್ಲಿ ಸಿಲುಕಿದವರೇ. ತ್ರಿಬಲ್​ ತಲಾಖ್​ ನಿಷೇಧದ ನಂತರವೂ ಪತ್ನಿಗೆ ತ್ರಿಬಲ್​ ತಲಾಖ್​ ಹೇಳಿದ ಈ ನ್ಯಾಯಾಧೀಶರ ಪತ್ನಿ ಕೋರ್ಟ್​ ಮೆಟ್ಟಿಲೇರಿದ್ದರು. ಆದರೆ ಅಲ್ಲಿ ಅವರ ಅರ್ಜಿ ವಜಾಗೊಂಡಿತ್ತು!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net