

ನಾಗ್ಪುರ: ಅಮೆರಿಕದ ಉಪಾಧ್ಯಕ್ಷೆಯಾಗಿ ಚುನಾಯಿತರಾಗಿರುವ ಕಮಲಾ ಹ್ಯಾರಿಸ್ ಭಾರತ ಮೂಲದವರು ಎಂದು ಇದಾಗಲೇ ಹಲವಾರು ಬಾರಿ ಹೇಳಿಕೊಂಡಿದ್ದಾರೆ. ಅವರ ತಾಯಿ ಭಾರತದವರಾಗಿರುವ ಬಗ್ಗೆ ಇದಾಗಲೇ ವರದಿಯಾಗಿದೆ. ಆದರೆ ಇದೀಗ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡೆನ್ ಅವರಿಗೂ ಭಾರತದ ಲಿಂಕ್ ಇದೆ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.
ಬೈಡೆನ್ ಅವರ ದೂರದ ಸಂಬಂಧಿಗಳು ಭಾರತದಲ್ಲಿಯೇ ಇರುವ ಬಗ್ಗೆ ಬೈಡೆನ್ ಅವರೇ ಹೇಳಿದ್ದಾರೆ. 1873ರಿಂದಲೇ ಮಹಾರಾಷ್ಟ್ರದ ನಾಗ್ಪುರದಲ್ಲಿ ಅವರ ಪೂರ್ವಜರು ವಾಸ ಮಾಡುತ್ತಿರುವ ಬಗ್ಗೆ 2013ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬೈಡೆನ್ ಹೇಳಿರುವುದಾಗಿ ತಿಳಿದುಬಂದಿದೆ.
2013ರಲ್ಲಿ ಬೈಡೆನ್ ಅಮೆರಿಕದ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮುಂಬೈಗೆ ಭೇಟಿ ನೀಡಿದ್ದರು. ಅಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ತಮ್ಮ ದೂರದ ಸಂಬಂಧಿಕರಲ್ಲಿ ಕೆಲವರು ಭಾರತದಲ್ಲಿ ವಾಸಿಸುತ್ತಿರುವ ಬಗ್ಗೆ ಹೇಳಿದ್ದರು.
ಇದನ್ನೂ ಓದಿ: ಪಟಾಕಿ ಬ್ಯಾನ್- ಸುಪ್ರೀಂಕೋರ್ಟ್ ಹೇಳಿದ್ದೇನು?
ಇದಾದ ಮೇಲೆ 2015ರಲ್ಲಿ ವಾಷಿಂಗ್ಟನ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ವೇಳೆಯೂ ಈ ವಿಷಯ ಪ್ರಸ್ತಾಪಿಸಿದ್ದರು. ತಮ್ಮ ಪೂರ್ವಜರು ಇಲ್ಲಿಯೇ ನೆಲೆಸಿರುವ ಬಗ್ಗೆ ಹೇಳಿದ್ದ ಬೈಡೆನ್, ಭಾರತಕ್ಕೆ ಮರಳಲು ಮತ್ತು ಮುಂಬೈಗೆ ಇಲ್ಲಿಗೆ ಬರಲು ಇದು ಒಂದು ಗೌರವವಾಗಿದೆ ಎಂದು ಅವರು ಹೇಳಿದ್ದರು.
"ನಾನು 1972ರಲ್ಲಿ ಸೆನೆಟರ್ ಆದ ನಂತರ ಭಾರತದ ಬೈಡೆನ್ ಒಬ್ಬರಿಂದ ಪತ್ರ ಸ್ವೀಕರಿಸಿದ್ದೆ. ನನ್ನ ಬಹು ಹಿಂದಿನ ತಲೆಮಾರು ಭಾರತದಲ್ಲಿ ವಾಸವಾಗಿರುವುದು ತಿಳಿದಿದೆ. ನನ್ನ ಮುತ್ತಜ್ಜನ ಮುತ್ತಜ್ಜನವರು ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು" ಎಂದು ಬೈಡೆನ್ ಹೇಳಿದ್ದರು. ನಂತರ ಈ ಪತ್ರದ ಬಗ್ಗೆ ವಿಚಾರಿಸಿದಾಗ ಇದು ನಾಗ್ಪುರ ಮೂಲದ ಲೆಸ್ಲಿ ಬೈಡೆನ್ ಎನ್ನುವವರು ಬರೆದಿದ್ದಾರೆ, ಅವರ ಮೊಮ್ಮಕ್ಕಳು ನಾಗ್ಪುರದಲ್ಲಿ ಉಳಿದುಕೊಂಡಿದ್ದಾರೆ ಮತ್ತು ಅವರ ಕುಟುಂಬವು 1873ರಿಂದ ಅಲ್ಲಿ ವಾಸಿಸುತ್ತಿದೆ ಎಂದು ಹೇಳಿಕೊಂಡಿರುವುದಾಗಿ ಪ್ರಸ್ತಾಪಿಸಿದರು.