ಭಯೋತ್ಪಾದಕರ ಗುಂಡಿಗೆ ಬಿಜೆಪಿ ಕೌನ್ಸಿಲರ್‌ ಬಲಿ- ಸ್ನೇಹಿತನ ಮನೆಗೆ ಹೋದಾಗ ನಡೆಸಿದರು ಕೃತ್ಯ!

jammu
Published on

ಶ್ರೀನಗರ: ಒಂದೆಡೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಸರಣಿ ಹತ್ಯಾಕಾಂಡ ನಡೆಯುತ್ತಿದ್ದರೆ, ಇತ್ತ ಜಮ್ಮು- ಕಾಶ್ಮೀರದಲ್ಲಿಯೂ ಬಿಜೆಪಿ ಮುಖಂಡರನ್ನು ಕೊಲೆ ಮಾಡುವ ಘಟನೆ ಮುಂದುವರೆದಿದೆ.
ಟ್ರಾಲ್ ಮುನ್ಸಿಪಲ್ ಕೌನ್ಸಿಲರ್ ರಾಕೇಶ್ ಪಂಡಿತ್ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿರುವ ಘಟನೆ ಪುಲ್ವಾಮಾ ಜಿಲ್ಲೆಯಲ್ಲಿ ನಡೆದಿದೆ. ಸ್ನೇಹಿತನನ್ನು ಭೇಟಿಯಾಗಲು ಟ್ರಾಲ್‍ಪಯಿನ್‍ಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಈ ಸುದ್ದಿಯನ್ನು ಅರಿತ ಭಯೋತ್ಪಾದಕರು ಅವರ ಮೇಲೆ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಪಂಡಿತ್‌ ಅಲ್ಲಿಯೇ ಮೃತಪಟ್ಟರೆ, ಅವರ ಸ್ನೇಹಿತನ ಮಗಳು ಗಂಭೀರವಾಗಿ ಗಾಯಗೊಂಡಿದ್ದಾಳೆ.

ರಾಕೇಶ್ ಅವರು ಶ್ರೀನಗರದ ವಸತಿ ಗೃಹದಲ್ಲಿ ವಾಸಿಸುತ್ತಿದ್ದರು. ಅವರಿಗೆ ಇದಾಗಲೇ ಜೀವಬೆದರಿಕೆ ಇದ್ದುದರಿಂದ ಇಬ್ಬರು ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿತ್ತು. ಆದರೆ ಸ್ನೇಹಿತನ ಮನೆಗೆ ಹೋಗುವ ಸಂದರ್ಭದಲ್ಲಿ ಅವರು ಸಿಬ್ಬಂದಿಯನ್ನು ಕರೆದುಕೊಂಡು ಹೋಗಿರಲಿಲ್ಲ ಎನ್ನಲಾಗಿದೆ.

https://twitter.com/ImRavinderRaina/status/1400150368152002561

ಈ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿರುವ ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಮುಖ್ಯಸ್ಥ ರವೀಂದರ್ ರೈನಾ, ರಾಕೇಶ್ ಪಂಡಿತ್ ಅವರ ಬಲಿಯನ್ನು ವ್ಯರ್ಥವಾಗಲು ಬಿಡುವುದಿಲ್ಲ. ಕಾಶ್ಮೀರದ ಕಣಿವೆಯಲ್ಲಿ ರಕ್ತದೋಕುಳಿಯನ್ನುಂಟು ಮಾಡುವ ಭಯೋತ್ಪಾದಕರ ನಿರ್ಮೂಲನೆ ಮಾಡಲಾಗುವುದು. ಇದು ಮಾನವೀಯತೆ ಮತ್ತು ಕಾಶ್ಮೀರದ ಹತ್ಯೆಯಾಗಿದೆ ಎಂದಿದ್ದಾರೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸಂತಾಪ ಸೂಚಿಸಿದ್ದಾರೆ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net