

ವಾಷಿಂಗ್ಟನ್: ಮಾಡಿಕೊಂಡಿರುವ ಉಪಗ್ರಹ ಒಪ್ಪಂದವೊಂದನ್ನು ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಇಸ್ರೋ ವಾಣಿಜ್ಯ ಘಟಕ ಆ್ಯಂಟ್ರಿಕ್ಸ್ ಕಾರ್ಪೊರೇಷನ್ ಇದೀಗ ಬೃಹತ್ ಮೊತ್ತದ ಪರಿಹಾರ ರೂಪದ ದಂಡಕ್ಕೆ ಒಳಗಾಗಿದೆ.
ಬೆಂಗಳೂರು ಮೂಲದ ಸ್ಟಾರ್ಟ್ಅಪ್ ದೇವಾಸ್ ಮಲ್ಟಿಮೀಡಿಯಾಕ್ಕೆ 1.2 ಶತಕೋಟಿ ಡಾಲರ್ ಪರಿಹಾರ ನೀಡಬೇಕು ಎಂದು ಆ್ಯಂಟ್ರಿಕ್ಸ್ ಕಾರ್ಪೊರೇಷನ್ಗೆ ಅಮೆರಿಕದ ನ್ಯಾಯಾಲಯ ಸೂಚಿಸಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಾಣಿಜ್ಯ ಘಟಕವಾಗಿರುವ ಆ್ಯಂಟ್ರಿಕ್ಸ್ ಕಾರ್ಪೊರೇಷನ್ 2005ರ ಜನವರಿಯಲ್ಲಿ ದೇವಾಸ್ ಮಲ್ಟಿಮೀಡಿಯಾದ ಜತೆ ಒಪ್ಪಂದ ಮಾಡಿಕೊಂಡಿತ್ತು. 70 ಮೆಗಾಹರ್ಟ್ಸ್ ಎಸ್-ಬ್ಯಾಂಡ್ ತರಂಗಾಂತರದ ಎರಡು ಉಪಗ್ರಹಗಳನ್ನು ನಿರ್ಮಿಸಿ, ಉಡಾವಣೆ ಮಾಡಿ, ಕಾರ್ಯಾಚರಣೆ ಮಾಡುವ ಒಪ್ಪಂದ ಇದಾಗಿದೆ. ಈ ಉಪಗ್ರಹಗಳನ್ನು ದೇವಾಸ್ ಭಾರತದಾದ್ಯಂತ ಸಂವಹನ ಸೇವೆ ಒದಗಿಸಲು ಬಳಸುವ ಉದ್ದೇಶ ಹೊಂದಿತ್ತು.
ಆದರೆ ಏಕಾಏಕಿಯಾಗಿ 2011ರ ಫೆಬ್ರುವರಿ 2011ರಲ್ಲಿ ಆ್ಯಂಟ್ರಿಕ್ಸ್ ಕಾರ್ಪೊರೇಷನ್ ಈ ಒಪ್ಪಂದವನ್ನು ರದ್ದುಪಡಿಸಿತು.
ಇದನ್ನು ಪ್ರಶ್ನಿಸಿ ದೇವಾಸ್ ಕೋರ್ಟ್ ಮೆಟ್ಟಿಲೇರಿತ್ತು. ಇದರ ತೀರ್ಪು ಇದೀಗ ಹೊರಕ್ಕೆ ಬಂದಿದೆ. ಆ್ಯಂಟ್ರಿಕ್ಸ್ ಕಾರ್ಪೊರೇಷನ್, ದೇವಾಸ್ಗೆ 56.5 ಕೋಟಿ ಡಾಲರ್ ಪರಿಹಾರ ನೀಡಬೇಕು. ಇದಕ್ಕೆ ಈವರೆಗಿನ ಬಡ್ಡಿ ಸೇರಿಸಿದರೆ ಒಟ್ಟು ಮೊತ್ತು 1.2 ಶತಕೋಟಿ ಡಾಲರ್ ಆಗುತ್ತದೆ' ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಈ ಒಪ್ಪಂದದ ಕುರಿತಂತೆ ಅಮೆರಿಕದ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಈ ಹಿಂದೆ ಅಂತಾರಾಷ್ಟ್ರಿಯ ಪ್ರಾಧಿಕಾರದ ರಚನೆಗೆ ಆದೇಶಿಸಿತ್ತು. ಪ್ರಾಧಿಕಾರ ಕೂಡ ಈ ಕ್ರಮದ ವಿರುದ್ಧ ಆದೇಶ ಹೊರಡಿಸಿತ್ತು. ಇದನ್ನು ಪರಿಗಣನೆಗೆ ತೆಗೆದುಕೊಂಡಿರುವ ಕೋರ್ಟ್, ಪರಿಹಾರ ನೀಡಲು ಸೂಚಿಸಿದೆ.
'ಅಮೆರಿಕದ ನ್ಯಾಯಾಲಯವು ಈ ಪ್ರಕರಣದ ವಿಚಾರಣೆ ನಡೆಸಲು ಅಧಿಕಾರ ಹೊಂದಿಲ್ಲ ಎಂದು ಕೂಡ ಆ್ಯಂಟ್ರಿಕ್ಸ್ ವಾದಿಸಿತ್ತು. ಆದರೆ ಅಮೆರಿಕದ ಸೀಟಲ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ದೇವಾಸ್, ಅಮೆರಿಕದಾದ್ಯಂತ ಸೇವೆ ಒದಗಿಸುತ್ತಿದೆ. ಹೀಗಾಗಿ ಈ ಪ್ರಕರಣದ ವಿಚಾರಣೆ ನಡೆಸಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದ್ದು, ಪರಿಹಾರ ರೂಪದ ದಂಡ ವಿಧಿಸಿದೆ.