ಹಿರಿಯ ಐಪಿಎಸ್ ಅಧಿಕಾರಿ ನಿಂಬಾಳ್ಕರ್‌ಗೆ ಐಎಂಎ ಉರುಳು; ಸುಪ್ರೀಂಕೋರ್ಟ್‌ ನೀಡಿದೆ ಶಾಕ್‌!

hemanth nimbalrkar
Published on

ನವದೆಹಲಿ: ದುಬಾರಿ ಬಡ್ಡಿ ನೀಡುವುದಾಗಿ ಜನರಿಂದ ಹೂಡಿಕೆ ಮಾಡಿಸಿಕೊಂಡು ಭಾರಿ ಮೋಸ ಮಾಡಿದ್ದ ವಂಚಕ ಕಂಪೆನಿ ಐಎಂಎ ಪ್ರಕರಣದಲ್ಲಿ ಸಿಲುಕಿದ್ದ ಕರ್ನಾಟಕದ ಹಿರಿಯ ಐಪಿಎಸ್‌ ಅಧಿಕಾರಿ ಹೇಮಂತ್‌ ನಿಂಬಾಳ್ಕರ್‌ ಅವರಿಗೆ ಈಗ ಪುನಃ ಸಂಕಷ್ಟ ಎದುರಾಗಿದೆ.

ಈ ಪ್ರಕರಣದಲ್ಲಿ ಇವರ ವಿರುದ್ಧ ಸಿಬಿಐ ದಾಖಲಿಸಿದ್ದ ಎಫ್ಐಆರ್ ಅನ್ನು ಈ ಹಿಂದೆ ಕರ್ನಾಟಕ ಹೈಕೋರ್ಟ್ ರದ್ದುಗೊಳಿಸುವ ಮೂಲಕ ನಿಂಬಾಳ್ಕರ್‌ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಿತ್ತು. ಆದರೀಗ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂಕೋರ್ಟ್‌ ತಡೆ ನೀಡಿರುವ ಹಿನ್ನೆಲೆಯಲ್ಲಿ ಪುನಃ ಈ ಕೇಸ್‌ ವಿಚಾರಣೆ ಮುಂದುವರೆಯಲಿದ್ದು, ಇದರ ಸುಳಿಯಲ್ಲಿ ನಿಂಬಾಳ್ಕರ್‌ ಸಿಲುಕಿದ್ದಾರೆ. 2020ರ ಫೆಬ್ರವರಿ 1ರಂದು ಸಿಬಿಐ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಂಬಾಳ್ಕರ್‌ ಅವರು ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಿದೆ.

ಏನಿದು ಪ್ರಕರಣ? ಚಿನ್ನದ ಮೇಲಿನ ಹೂಡಿಕೆ, ದುಬಾರಿ ಬಡ್ಡಿ ಆಸೆ ಹುಟ್ಟಿಸಿ ಸಾವಿರಾರು ಮಂದಿಯಿಂದ ಸಾವಿರಾರು ಕೋಟಿ ವಸೂಲಿ ಮಾಡಿದ್ದ ಐಎಂಎ, ಜನರಿಗೆ ಮೋಸ ಮಾಡಿತ್ತು. ಇದರಿಂದ ಹಲವಾರು ಮಂದಿ ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿತ್ತು.

ಆದರೆ ಈ ಕುರಿತು ತನಿಖೆ ನಡೆಸಿದ್ದ ಅಧಿಕಾರಿಗಳು ಕಂಪೆನಿ ಪರವಾಗಿಯೇ ವರದಿ ನೀಡಿದ್ದರು. ಇದೇ ಪ್ರಕರಣದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್ ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದರು. ಉಪ ವಿಭಾಗಾಧಿಕಾರಿ ಎಲ್‌.ಸಿ. ನಾಗರಾಜ್ ಅವರನ್ನು ಬಂಧಿಸಲಾಗಿತ್ತು. ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಸೇರಿದಂತೆ ಅಜಯ್ ಹಿಲೋರಿ, ಡಿವೈಎಸ್ಪಿ ಶ್ರೀಧರ್, ಇನ್‌ಸ್ಪೆಕ್ಟರ್ ರಮೇಶ್ ಮತ್ತಿತರು ಕರ್ತವ್ಯಲೋಪ ಎಸಗಿರುವುದಾಗಿ ಸಿಬಿಐ ಹೇಳಿತ್ತು. ಆದರೆ ಹೇಮಂತ್ ನಿಂಬಾಳ್ಕರ್ ಅವರನ್ನು ಬಿಟ್ಟು ಉಳಿದ ಅಧಿಕಾರಿಗಳನ್ನು ಸರ್ಕಾರ ಅಮಾನತು ಮಾಡಿತ್ತು. ಆದರೆ ಇವರ ವಿರುದ್ಧ ಚಾರ್ಜ್‌ಷೀಟ್‌ ಸಲ್ಲಿಸಲಾಗಿತ್ತು. ಇದಕ್ಕೆ ಹೈಕೋರ್ಟ್‌ ತಡೆ ನೀಡಿದ್ದರಿಂದ ನಿಂಬಾಳ್ಕರ್‌ ನಿರಾಳರಾಗಿದ್ದರು. ಆದರೆ ಈಗ ಹೈಕೋರ್ಟ್‌ ಆದೇಶವನ್ನು ಸಿಬಿಐ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದೆ.

ಈ ನಡುವೆಯೇ ನಿಂಬಾಳ್ಕರ್ ಅವರನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಐಜಿಪಿಯಾಗಿ ವರ್ಗಾವಣೆ ಮಾಡಿ ಸರ್ಕಾರ ಜನವರಿ 11ರಂದು ಆದೇಶ ಹೊರಡಿಸಿತ್ತು. ನಿರ್ಭಯಾ ನಿಧಿ ಗುತ್ತಿಗೆ ಯೋಜನೆ ಟೆಂಡರ್ ಪ್ರಕ್ರಿಯೆಯಲ್ಲಿ ನಿಂಬಾಳ್ಕರ್ ಪಾತ್ರದ ಬಗ್ಗೆ ಅಂದಿನ ಗೃಹ ಕಾರ್ಯದರ್ಶಿ ಡಿ.ರೂಪಾ ಆಕ್ಷೇಪ ವ್ಯಕ್ತಪಡಿಸಿದ್ದರು. ಇಬ್ಬರೂ ಐಪಿಎಸ್ ಅಧಿಕಾರಿಗಳ ನಡುವೆ ಹೇಳಿಕೆ-ಪ್ರತಿಹೇಳಿಕೆಗಳು ಕೆಲ ಸಮಯ ಹರಿದಾಡಿದ್ದವು. ನಂತರ ಇಬ್ಬರನ್ನೂ ವರ್ಗಾವಣೆ ಮಾಡಿರುವುದು ಇಲ್ಲಿ ಉಲ್ಲೇಖಾರ್ಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net