ಸಚಿವನ ಪುತ್ರನ ಮೇಲೆ ರೇಪ್​, ಗರ್ಭಪಾತ ಆರೋಪ ಹೊರಿಸಿದಾಕೆಗೆ ಸಾರ್ವಜನಿಕವಾಗಿ ಮಸಿ ಬಳಿದು ವಿಕೃತಿ!

minister
Published on

ನವದೆಹಲಿ: ರಾಜಸ್ಥಾನ ಕಾಂಗ್ರೆಸ್​ ಸಚಿವ ಮಹೇಶ್ ಜೋಶಿ ಅವರ ಮಗ ರೋಹಿತ್ ಜೋಶಿ ವಿರುದ್ಧ ಇತ್ತೀಚೆಗೆ ಯುವತಿಯ ಅತ್ಯಾಚಾರದ ಆರೋಪ ಹೊರಿಸಿದ್ದರು.

ಶನಿವಾರ ರಾತ್ರಿ ಯುವತಿ ತಾಯಿಯ ಜತೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕೆಲವು ಯುವಕರು ಬಂದು ಮಸಿ ಬಳಿದು ಹೋಗಿದ್ದಾರೆ. ಈ ಬಗ್ಗೆ ಮಾಹಿತಿ ಸಿಕ್ಕ ಸ್ಥಳಕ್ಕೆ ತೆರಳಿ ಯುವತಿಯನ್ನು ತಕ್ಷಣವೇ ಏಮ್ಸ್​ ಆಸ್ಪತ್ರೆಯ ಟ್ರಾಮಾ ಸೆಂಟರ್‌ಗೆ ದಾಖಲು ಮಾಡಲಾಯಿತು. ನಂತರ ಆಕೆ ಮೇಲೆ ಎಸೆದಿರುವುದು ನೀಲಿ ಇಂಕ್​​ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಈ ಪ್ರಕರಣ ಸಂಬಂಧ ದಾಖಲಾದ ಎಫ್ಐಆರ್​ ಪ್ರತಿ, ಆರೋಪಿಗಳ ಬಂಧನ ಕುರಿತ ಮಾಹಿತಿ ಹಾಗೂ ಸಂತ್ರಸ್ತೆ ಮತ್ತು ಕುಟುಂಬಕ್ಕೆ ಸುರಕ್ಷತೆ ಹಾಗೂ ರಕ್ಷಣೆ ಬಗ್ಗೆ ಪೊಲೀಸರು ತೆಗೆದುಕೊಂಡು ಕ್ರಮಗಳ ವಿವರಣೆ ಸಲ್ಲಿಸುವಂತೆ ಪೊಲೀಸರಿಗೆ ಮಹಿಳಾ ಆಯೋಗದ ಅಧ್ಯಕ್ಷರು ಸೂಚಿಸಿದ್ದಾರೆ.

ಏನಿದು ಘಟನೆ?

ಯುವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಇರುವುದು ಏನೆಂದರೆ: ಮಹೇಶ್‌ ಜೋಶಿ ಪುತ್ರ ರೋಹಿತ್‌ ಜೋಶಿ ನನಗೆ ಫೇಸ್‌ಬುಕ್‌ನಲ್ಲಿ ಪರಿಚಯ ಆಗಿದ್ದರು. ನಂತರ ಇಬ್ಬರೂ ಭೇಟಿಯಾಗಲು ನಿರ್ಧರಿಸಿದೆವು. ನಂತರ 2021ರ ಆರಂಭದಲ್ಲಿ ಆತ ನನ್ನನ್ನು ಜೈಪುರದ ಸವಾಯಿ ಮಾಧವ್ ಪುರಕ್ಕೆ ಬರುವಂತೆ ಹೇಳಿದ್ದ. ಅಲ್ಲಿಯ ಹೋಟೆಲ್‌ ಒಂದಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ನಮ್ಮಿಬ್ಬರನ್ನು ಗಂಡ-ಹೆಂಡತಿ ಎಂದು ನಮೂದು ಮಾಡಿದ್ದ ಆ ಸಂದರ್ಭದಲ್ಲಿ ನನಗೆ ಗೊತ್ತಿಲ್ಲದೇ ಮತ್ತು ಬರುವ ಪಾನೀಯ ಸೇವಿಸಲು ಕೊಟ್ಟಿದ್ದಾರೆ. ನನಗೆ ಎಚ್ಚರವಾದಾಗ ನಗ್ನವಾಗಿದ್ದೆ. ಇದನ್ನು ವಿಡಿಯೋ ಮಾಡಿಕೊಂಡಿದ್ದ ಆತ ಯಾರಿಗಾದರೂ ವಿಷಯ ಹೇಳಿದರೆ ಈ ವಿಡಿಯೋ ಲೀಕ್‌ ಮಾಡುವುದಾಗಿ ಹೇಳಿದ್ದ.

ಕಳೆದ ವರ್ಷದ ಆಗಸ್ಟ್‌ ತಿಂಗಳಿನಲ್ಲಿ ನಾನು ಗರ್ಭ ಧರಿಸಿದೆ. ಗರ್ಭಪಾತ ಮಾಡುವಂತೆ ಹೇಳಿದ. ಮಾತ್ರೆ ಕೊಟ್ಟಿದ್ದ. ಆದರೆ ಅದನ್ನು ನಾನು ಸೇವಿಸಿರಲಿಲ್ಲ. ಇಷ್ಟೇ ಅಲ್ಲದೇ, ಈತ ನನ್ನ ಮೇಲೆ ದೆಹಲಿ ಮತ್ತು ಜೈಪುರದಲ್ಲಿ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ. ನಂತರ ಮದುವೆಯಾಗದೇ ಕೈಕೊಟ್ಟಿದ್ದಾನೆ ಎಂದು ಯುವತಿ ಹೇಳಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net