

ಜಕಾರ್ತ: ಕರೊನಾ ರೋಗಿಗಳು ಪ್ರಯಾಣಿಸಲು ಅನುಮತಿ ನೀಡದ ಕಾರಣ ವ್ಯಕ್ತಿಯೋರ್ವ ತನ್ನ ಹೆಂಡತಿಯ ವೇಷ ಧರಿಸಿಕೊಂಡು ವಿಮಾನವೇರಿದ್ದು, ಇನ್ನೇನು ತಲುಪಬೇಕಿದ್ದ ಊರನ್ನು ಸೇರುವವನಿದ್ದ. ಆದರೆ ಆತ ಮಾಡಿದ ಒಂದೇ ಒಂದು ತಪ್ಪಿನಿಂದ ವಿಮಾನ ಲ್ಯಾಂಡ್ ಆದ ಕೂಡಲೇ ಪೋಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಇಂಥದ್ದೊಂದು ಘಟನೆ ನಡೆದಿರುವುದು ಇಂಡೋನೇಷ್ಯಾದಲ್ಲಿ. ಅಡಿಯಿಂದ ಮುಡಿಯವರೆಗೂ ಕಾಣಿಸದಂತೆ ಬುರ್ಖಾ ಧರಿಸಿದ ಈ ವ್ಯಕ್ತಿ ಜಕಾರ್ತಾದಿಂದ ಟೆರ್ನೇಟ್ಗೆ ಪ್ರಯಾಣಿಸುತ್ತಿದ್ದ. ಆದರೆ ಕರೊನಾ ಸೋಂಕು ಇದ್ದ ಕಾರಣ, ವಿಮಾನದಲ್ಲಿ ಬಿಡುವುದಿಲ್ಲ ಎಂದು ತಿಳಿದಿತ್ತು. ಆದರೆ ಅವರಿಗೆ ಕರೊನಾ ನೆಗೆಟಿವ್ ವರದಿ ಸಿಕ್ಕಿರಲಿಲ್ಲ.
ಈ ಕಾರಣದಿಂದ ಆತ ಒಂದು ಪ್ಲ್ಯಾನ್ ಮಾಡಿಯೇ ಬಿಟ್ಟ. ಅದೇನೆಂದರೆ ಬುರ್ಖಾ ಧರಿಸಿ ಪತ್ನಿಯ ಗುರುತಿನ ಚೀಟಿ ಹಾಗೂ ಆಕೆಯ ಕೋವಿಡ್ ನೆಗೆಟಿವ್ ರಿಪೋರ್ಟ್ ಹಿಡಿದು ಹೋಗಿದ್ದಾನೆ. ಚೆಕಿಂಗ್ ಪಾಯಿಂಟ್ನಲ್ಲಿ ಅಧಿಕಾರಿಗಳು ಕೂಡ ಆತ ಹೆಣ್ಣು ಎಂದುಕೊಂಡು ಮುಂದಕ್ಕೆ ಬಿಟ್ಟಿದ್ದಾರೆ. ವಿಮಾನವನ್ನೂ ನಿಶ್ಚಿಂತೆಯಿಂದ ಏರಿದ್ದಾನೆ.
ಇನ್ನೇನು ವಿಮಾನ ಟೆರ್ನೇಟ್ಗೆ ಸೇರಲಿದೆ ಎಂದಾಗ ಬಾತ್ರೂಂಗೆ ಹೋಗಿ ವೇಷ ಬದಲಿಸಿ ಪುರುಷನಂತೆ ಹೊರಬಂದಿದ್ದಾನೆ. ಇದನ್ನು ವಿಮಾನ ಸಿಬ್ಬಂದಿಯೋರ್ವ ನೋಡಿಬಿಟ್ಟಿದ್ದಾನೆ. ಕುಡಲೇ ವಿಮಾನ ನಿಲ್ದಾಣಕ್ಕೆ ಮಾಹಿತಿ ನೀಡಿದ್ದಾನೆ. ಇದರಿಂದ ಎಚ್ಚೆತ್ತ ಪೊಲೀಸರು ಆತ ವಿಮಾನದಿಂದ ಇಳಿಯುತ್ತಿದ್ದಂತೆಯೇ ಬಂಧಿಸಿದ್ದಾರೆ. ಬಳಿಕ ಕರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದ ಕಾರಣ ಸದ್ಯ ಆತನನ್ನು ಕ್ವಾರಂಟೈನ್ ಮಾಡಿದ್ದಾರೆ.