

ನವದೆಹಲಿ: ಭಾರತ ಮೂಲದ ಎಲ್ಲಾ ವಿಮಾನಗಳು ಮತ್ತು ಇಲ್ಲಿಯ ವಿಮಾನ ನಿಲ್ದಾಣಗಳಲ್ಲಿ ಇನ್ನುಮೂದೆ ದೇಸಿ ಸಂಗೀತ ಮೊಳಗಲಿದೆ. ಏಕೆಂದರೆ ಇದೇ ಸಂಗೀತವನ್ನು ಬಳಸುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಗಳು ಮತ್ತು ಭಾರತದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ವಿಮಾನಯಾನ ಕಂಪನಿಗಳಿಗೆ ಸೂಚಿಸಿದೆ.
ದೇಸಿ ಸಂಗೀತಕ್ಕೆ ಒತ್ತು ನೀಡುವ ಹಿನ್ನೆಲೆಯಲ್ಲಿ ಭಾರತೀಯ ಸಾಂಸ್ಕೃತಿಕ ಸಂಶೋಧನಾ ಮಂಡಳಿಯು ಕೇಂದ್ರಕ್ಕೆ ಈ ಮನವಿಯನ್ನು ಸಲ್ಲಿಸಿತ್ತು. ಅದಕ್ಕೆ ಒಪ್ಪಿಗೆ ಸೂಚಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಈ ಬಗ್ಗೆ ಸೂಚನೆ ಹೊರಡಿಸಿದೆ.
ನಮ್ಮ ಭಾರತೀಯ ಸಂಗೀತವು ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯನ್ನು ಹೊಂದಿದೆ. ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುವ ಅನೇಕ ವಿಷಯಗಳಲ್ಲಿ ಇದು ಕೂಡ ಒಂದು. ಆದ್ದರಿಂದ ಭಾರತೀಯ ಸಂಗೀತಕ್ಕೆ ಆದ್ಯತೆ ನೀಡಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಉಷಾ ಪಾಧಿ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣ ನಿರ್ವಾಹಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ಸಂಗೀತವು ಸಾಮಾಜಿಕ-ಧಾರ್ಮಿಕ ಜೀವನದ ಅವಿಭಾಜ್ಯ ಅಂಗವಾಗಿದೆ. ವಿದೇಶಿ ವಿಮಾನಗಳು ಬಳಸುವ ಸಂಗೀತ ಆಯಾ ದೇಶಗಳ ಸಂಗೀತವಾಗಿದೆ. ಅಮೆರಿಕನ್ ಏರ್‌ಲೈನ್ಸ್‌ನಲ್ಲಿ ಜಾಝ್, ಆಸ್ಟ್ರೇಲಿಯನ್ ಏರ್‌ಲೈನ್ಸ್ ನಲ್ಲಿ ಮೊಜಾರ್ಟ್ ಮತ್ತು ಮಧ್ಯಪ್ರಾಚ್ಯದ ವಿಮಾನಯಾನದಲ್ಲಿ ಅರಬ್ ಸಂಗೀತ ಪ್ರಸಾರ ಮಾಡಲಾಗುತ್ತಿದೆ. ಆದರೆ ಭಾರತದ ವಿಮಾನಗಳಲ್ಲಿ ಕೆಲವೊಮ್ಮೆ ವಿದೇಶಿ ಸಂಗೀತಗಳೂ ಕೇಳಿಸುತ್ತಿವೆ. ಆದ್ದರಿಂದ ಇನ್ಮುಂದೆ ಭಾರತೀಯ ಸಂಗೀತವೇ ಮೊಳಗಬೇಕು ಎಂದು ಸಚಿವಾಲಯ ಹೇಳಿದೆ.