ಬಂದೂಕು ತೋರಿದವರಿಗೂ ಬಾಗಿಲು ತೆರೆದ ಭಾರತ! ಸಹಾಯ ಮಾಡುವವರಿಲ್ಲದೇ ತತ್ತರಿಸಿದ ಅಫ್ಘನ್ನರ ಕಣ್ಣೀರು ಒರೆಸಿದ ಸೇನೆ

kabul
Published on

ಕಾಬೂಲ್​ (ಅಫ್ಘಾನಿಸ್ತಾನ): ಭೀಕರವಾದ ಭೂಕಂಪದಿಂದ ಒಂದು ಸಾವಿರಕ್ಕೂ ಅಧಿಕ ಮಂದಿಯನ್ನು ಕಳೆದುಕೊಂಡಿರುವ ಅಫ್ಘಾನಿಸ್ತಾನಿಗಳಿಗೆ ಭಾರತ ಸಹಾಯಹಸ್ತ ಚಾಚಿದೆ. ಭಾರತದ ತಾಂತ್ರಿಕ ತಂಡ ಇಂದು ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ಗೆ ಭೇಟಿ ನೀಡಿದೆ.

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಆಕ್ರಮಿಸಿಕೊಂಡ ಬಳಿಕ ಬಂದೂಕಿನ ಸದ್ದು ಕೇಳಿಬಂತಿತ್ತು. ಈ ಸಂದರ್ಭದಲ್ಲಿ ಸಿಕ್ಕಸಿಕ್ಕವರ ಮೇಲೆ ಗುಂಡು ಹಾರಿಸಲಾಗಿತ್ತು. ಸುರಕ್ಷತೆಯ ದೃಷ್ಟಿಯಿಂದ ಭಾರತವು ಕಾಬೂಲ್‌ನಲ್ಲಿರುವ ರಾಯಭಾರ ಕಚೇರಿಯನ್ನು ಮುಚ್ಚಿತ್ತು. ಇದೀಗ ಮತ್ತೆ ರಾಯಭಾರ ಕಚೇರಿಯನ್ನು ಭಾರತ ತೆರೆಯುವ ಮೂಲಕ ವಿಶಾಲ ಹೃದಯ ಮೆರೆದಿದೆ.

ಭೂಕಂಪದಲ್ಲಿ ಸಂತ್ರಸ್ತರಾಗಿರುವವರ ನೆರವಿಗೆ ಧಾವಿಸುವಂತೆ ತಾಲಿಬಾನ್‌ ಆಡಳಿತವು ಮನವಿ ಮಾಡಿದೆಯಾದರೂ, ಸದ್ಯ ಆಪ್ಘಾನಿಸ್ತಾನದಲ್ಲಿ ಯಾವುದೇ ವಿದೇಶಿ ನೆರವಿನ ಸಂಸ್ಥೆಗಳು ಇಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ದೇಶಗಳಿಂದಲೂ ಅಲ್ಲಿಗೆ ತಕ್ಷಣ ನೆರವು ಸಿಗುವ ಸಾಧ್ಯತೆ ಇಲ್ಲದ್ದರಿಂದ ಜನರ ಕಣ್ಣೀರು ಒರೆಸುವವರೇ ಇಲ್ಲವಾಗಿದೆ. ಇಂಥ ಭೀಕರ ಪರಿಸ್ಥಿತಿಯಲ್ಲಿ ಭಾರತ ನೆರವಿನ ಹಸ್ತ ಚಾಚಿದೆ.

ಭಾರತ, ನಿಜವಾಗಿಯೂ ಮೊದಲು ಸ್ಪಂದಿಸಿದ ರಾಷ್ಟ್ರ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಪರಿಹಾರ ಸರಕನ್ನು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ ಮತ್ತು ಕಾಬೂಲ್‌ನಲ್ಲಿರುವ ಅಫ್ಘಾನ್ ರೆಡ್ ಕ್ರೆಸೆಂಟ್ ಸೊಸೈಟಿಗೆ ಹಸ್ತಾಂತರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಎರಡು ವಿಮಾನಗಳಲ್ಲಿ 27 ಟನ್ ಪರಿಹಾರ ನೆರವು, ರಿಡ್ಜ್ ಟೆಂಟ್‌ಗಳು, ಸ್ಲೀಪಿಂಗ್ ಬ್ಯಾಗ್‌ಗಳು, ಕಂಬಳಿಗಳು ಮತ್ತು ಮಲಗುವ ಚಾಪೆಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಒಳಗೊಂಡಿದೆ ಎಂದು ಸಚಿವಾಲಯದ ಹೇಳಿಕೆಯು ತಿಳಿಸಿದೆ.

ನೆರವು ವಿತರಣಾ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತೊಂದು ಭಾರತೀಯ ತಂಡವು ಕಾಬೂಲ್‌ಗೆ ಭೇಟಿ ನೀಡಿದೆ. ಈ ವೇಳೆ ತಾಲಿಬಾನ್ ಹಿರಿಯ ಸದಸ್ಯರ ಜೊತೆ ಭೇಟಿ ಮಾಡಿ ಮಾತುಕತೆ ನಡೆಸಿದೆ. ಈ ವೇಳೆ ಭದ್ರತೆ ಕುರಿರು ಕೂಡ ಚರ್ಚೆ ನಡೆಸಲಾಗಿದೆ. ಆಫ್ಘಾನ್ ಜತೆ ಭಾರತ ಹಲವು ಪಾಲುದಾರಿಕೆಯನ್ನು ಹೊಂದಿದೆ. ಆಫ್ಘಾನಿಸ್ತಾನದಲ್ಲಿ ಭಾರತ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಈ ಪಾಲುದಾರಿಕೆಯನ್ನು ಮುನ್ನಡೆಸಲು ಭಾರತ ಸಿದ್ಧವಾಗಿದೆ ಎಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net