ಎಲ್ಲರೂ 'ಐಟಂ'ಗಳೇ ಎಂದ ಕಾಂಗ್ರೆಸ್​- ಮಗಳನ್ನು ಹೀಗೆ ಕರೆದ್ರೆ ಸೋನಿಯಾ ಸುಮ್ಮನಿರ್ತಿದ್ರಾ ಎಂದ ಸಚಿವೆ!

imarthidevi-sonia
Published on

ಭೋಪಾಲ್​: ಬಿಜೆಪಿಗೆ ಸೇರ್ಪಡೆಯಾಗಿರುವ ಮಧ್ಯಪ್ರದೇಶ ಸಚಿವೆ ಇಮರ್ತಿ ದೇವಿ ಅವರನ್ನು ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ʼಐಟಂʼ ಎಂದು ಕರೆದಿರುವುದಕ್ಕೆ ಇಮರ್ತಿ ದೇವಿ ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀವು ಒಬ್ಬ ತಾಯಿ, ನಿಮಗೂ ಒಬ್ಬಳು ಮಗಳಿದ್ದಾಳೆ. ನಿಮ್ಮ ಮಗಳಿಗೆ ಯಾರಾದರೂ "ಐಟಂ" ಎಂದು ಹೇಳಿದ್ದರೆ ನೀವು ಸುಮ್ಮನಿರುತ್ತಿದ್ರಾ ಎಂದು ಇಮರ್ತಿದೇವಿಯವರು ಸೋನಿಯಾಗಾಂಧಿಯವರನ್ನು ಪ್ರಶ್ನಿಸಿದ್ದಾರೆ.

ನಾನು ಒಬ್ಬಳು ಬಡ ಕುಟುಂಬದಿಂದ ಬಂದ ಹೆಣ್ಣುಮಗಳು. ನನ್ನ ಮೇಲೆ ಈ ರೀತಿ ಕೆಟ್ಟ ಶಬ್ದಗಳಿಂದ ಟೀಕೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಇಮರ್ತಿದೇವಿ, ಇಂಥವರನ್ನು ನಿಮ್ಮ ಪಕ್ಷದಿಂದ ಕೂಡಲೇ ತೆಗೆದುಹಾಕಬೇಕು ಎಂದು ಸೋನಿಯಾಗಾಂಧಿಯವರನ್ನು ಆಗ್ರಹಿಸಿದ್ದಾರೆ.

ಮಧ್ಯಪ್ರದೇಶದ ಡಾಬ್ರಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಅಂಗವಾಗಿ ಇಂದು ಪ್ರಚಾರ ನಡೆಸಿದ ಕಮಲ್​ನಾಥ್​ ಇಮರ್ತಿ ದೇವಿಯವರನ್ನು ಲೇವಡಿ ಮಾಡಿದ್ದರು. ಉಪಚುನಾವಣಾ ಪ್ರಚಾರದಲ್ಲಿ ತಮ್ಮ ಅಭ್ಯರ್ಥಿಯ ಪರ ಮತಯಾಚಿಸುತ್ತಿದ್ದ ಕಮಲ್​ನಾಥ್​ ಇಮರ್ತಿದೇವಿಯವರ ಕುರಿತು ಮಾತನಾಡುವಾಗ "ಏನ್​ ಐಟಂ ಇವಳು' ಎಂದಿದ್ದರು.

ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ ಎಂದಿರುವ ಕಾಂಗ್ರೆಸ್​ ಮುಖಂಡರು, ನಾವೆಲ್ಲರೂ ಒಂದು ರೀತಿಯ ಐಟಂಗಳೇ ಎಂದು ಸಮರ್ಥನೆ ಮಾಡಿಕೊಂಡಿದೆ. ಈ ಕುರಿತು ಹೇಳಿಕೆ ನೀಡಿರುವ ಕಮಲ್​ನಾಥ್​, ಹೌದು, ನಾನು ಇಮರ್ತಿಯವರನ್ನು ಐಟಂ ಎಂದು ಹೇಳಿರುವುದು ನಿಜ. ಅದರಲ್ಲಿ ಏನಿದೆ? ಅದೇನು ಕೆಟ್ಟ ಶಬ್ದವಲ್ಲ, ನಾವೆಲ್ಲರೂ ಐಟಂಗಳೇ ಎಂದಿದ್ದಾರೆ.

ಅದೇ ಇನ್ನೊಂದೆಡೆ, ಈ ಹೇಳಿಕೆ ವಿರುದ್ಧ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಸಂಸದ ಜ್ಯೋತಿರಾಧಿತ್ಯ ಸೇರಿದಂತೆ ಹಲವು ಮುಖಂಡರು ಉಪವಾಸ ಧರಣಿ ಕೈಗೊಂಡರು. ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮಾರ್ ಮತ್ತು ಬಿಜೆಪಿ ಇತರೆ ಮುಖಂಡರು ಇಂದು ಸುಮಾರು 2 ತಾಸು ಮೌನ ಉಪವಾಸ ಧರಣಿ ನಡೆಸಿದರು. ಜ್ಯೋತಿರಾಧಿತ್ಯ ಸಿಂಧಿಯಾ ಅವರ ನಿಷ್ಠಾವಂತೆ ಹಾಗೂ ಮಧ್ಯ ಪ್ರದೇಶ ಸರ್ಕಾರದ ಸಚಿವೆ ಇಮರ್ತಿ ದೇವಿ ಅವರನ್ನು ಐಟಮ್ ಎಂದು ಕರೆದು ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಇಂಥ ಹೇಳಿಕೆ ಕಾಂಗ್ರೆಸ್ ನಾಯಕರ ಮನಸ್ಥಿತಿಯನ್ನು ತಿಳಿಸುತ್ತದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net