

ಫ್ಲೋರಿಡಾ: ವಿಶ್ವದ ಅತೀ ದೊಡ್ಡ ದೂರದರ್ಶಕದ ಪೈಕಿ ಎರಡನೇ ಸ್ಥಾನದಲ್ಲಿದ್ದ, ವಿಜ್ಞಾನ ಪ್ರಪಂಚದ ರತ್ನ ಎಂದೇ ಹೇಳಲಾಗುತ್ತಿದ್ದ ರೇಡಿಯೊ ಟೆಲಿಸ್ಕೋಪ್ನ ಬೃಹತ್ ಅಂಟೇನಾ ಅರೆಸಿಬೊ ಮುರಿದುಬಿದ್ದಿರುವ ಘಟನೆ ನಡೆದಿದೆ.
ಸುಮಾರು 900 ಟನ್ ತೂಕವಿರುವ ಅರೆಸಿಬೊ ಹಲವಾರು ಗ್ರಹಗಳನ್ನು ಪತ್ತೆ ಹಚ್ಚಲು ಸಹಾಯ ಮಾಡಿದೆ. ಇದು ಪೋರ್ಟ್ರಿಕೊದಲ್ಲಿದೆ. ಈ ಅಂಟೇನಾ ನೆಲಕ್ಕೆ ಅಪ್ಪಳಿಸುತ್ತಿರುವ ದೃಶ್ಯ ಖಗೋಲ ವೀಕ್ಷಣೆ ನಿರ್ವಹಣೆ ಕೇಂದ್ರದ ಛಾವಣಿ ಮೇಲಿರುವ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಹಿಂದೆಯೇ ಅದರ ಕೇಬಲ್‌ಗಳು ಮುರಿದು ಬಿದ್ದಿದ್ದವು. ಇದೀಗ ಎರಡು ಕೇಬಲ್ 60 ಅಡಿ ಎತ್ತರದ ಟವರ್ನಿಂದ ಕಿತ್ತು ಬಿದ್ದಿದೆ. ಆಗಸ್ಟ್ 10 ಮತ್ತು ನವೆಂಬರ್ 6 ರಂದು ಎರಡು ಕೇಬಲ್‌ಗಳು ಟವರ್ನಿಂದ ಕಳಚಿಕೊಂಡಿರುವುದನ್ನು ಡ್ರೋನ್ ಕ್ಯಾಮೆರಾ ಸೆರೆಹಿಡಿದಿತ್ತು. ಒಂದು ಸಾವಿರ ಅಡಿ ಗಾತ್ರದ ಡಿಶ್ ಅಂಟೇನಾ ಹೊಂದಿರುವ ಅರೆಸಿಬೊ ಟೆಲಿಸ್ಕೋಪ್ ಕಳೆದ 50 ವರ್ಷಗಳಿಂದ ಖಗೋಳ ವಿಜ್ಞಾನದಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದಿದ್ದಾರೆ ಖಗೋಳ ವಿಜ್ಞಾನಿಗಳು.
ಈ ಕುರಿತು ತೀವ್ರ ವಿಷಾದ ವ್ಯಕ್ತಪಡಿಸಿರುವ ನ್ಯಾಷನಲ್ ಸೈನ್ಸ್ ಫೌಂಡೇಷನ್ನ ಖಗೋಳ ವಿಜ್ಞಾನ ವಿಭಾಗದ ನಿರ್ದೇಶಕ ರಾಲ್ಫ್ ಗೌಮ್, ‘ನಮಗೆ ತುಂಬಾ ದುಃಖವಾಗಿದೆ. ಈ ಘಟನೆಯಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ ಎನ್ನುವುದೇ ನಮ್ಮ ಅದೃಷ್ಟ. ಆದರೆ ಇದರಿಂದ ಖಗೋಳ ಅಧ್ಯಯನಕ್ಕೆ ಸಾಕಷ್ಟು ತೊಂದರೆಯುಂಟಾಗಿದೆ ಎಂದಿದ್ದಾರೆ.
ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಭೂಮಿಯ ಮೇಲೆ ಕುಳಿತು ಬಾಹ್ಯಾಕಾಶದ ರಹಸ್ಯಗಳನ್ನು ಬಗೆಹರಿಸುತ್ತಿರುವ ಈ ಅರೆಸಿಬೊ ಕುಸಿತವನ್ನು ಹವಾಮಾನಶಾಸ್ತ್ರಜ್ಞ ಅದಾ ಮೊಂಜನ್ ವಿವರಿಸಿದ್ದು ಹೀಗೆ: ಇದರಿಂದ ವಿಜ್ಞಾನಿಗಳಿಗೆ ದೊಡ್ಡ ನಷ್ಟವಾಗಿದೆ.ಬೀಳುವಾಗ ಅರೆಸಿಬೊ ತುಂಬಾ ಭಾವನಾತ್ಮಕವಾಗಿ ಕಾಣುತ್ತಿತ್ತು. ಅದನ್ನು ಉಳಿಸಲು ಸಾಕಷ್ಟು ಪ್ರಯತ್ನ ಮಾಡಲಾಯಿತು ಎಂದಿದ್ದಾರೆ. ಅರೆಸಿಬೊ ವಿಜ್ಞಾನ ಪ್ರಪಂಚದ ರತ್ನವಾಗಿದ್ದು, ಅದು ಈಗಲ್ಲ ಎಂದು ನಂಬುವುದು ಕಷ್ಟ ಎಂದಿದ್ದಾರೆ.
1960ರಲ್ಲಿ ಇದರ ನಿರ್ಮಾಣ ಆರಂಭವಾಗಿದ್ದು 1963ರಲ್ಲಿ ಪೂರ್ಣಗೊಂಡಿತ್ತು. 2016ರ ಜುಲೈ ತಿಂಗಳಲ್ಲಿ ಚೀನಾದಲ್ಲಿ ಫಾಸ್ಟ್ ಟೆಲಿಸ್ಕೋಪ್ ನಿರ್ಮಾಣವಾಗುವವರೆಗೆ ಅತೀ ದೊಡ್ಡ ಟೆಲಿಸ್ಕೋಪ್ ಎಂಬ ಹೆಗ್ಗಳಿಕೆ ಅರೆಸಿಬೊಗೆ ಇತ್ತು ಎಂಬ ಮಾಹಿತಿ ಅವರು ನೀಡಿದ್ದಾರೆ.
ಅರೆಸಿಬೊ ಟೆಲಿಸ್ಕೋಪ್ನ ಕಾರ್ಯಾಚರಣೆಯನ್ನು ದಿ ನ್ಯಾಷನಲ್ ಸೈನ್ಸ್ ಫೌಂಡೇಷನ್ ನಿರ್ವಹಿಸುತ್ತಿದ್ದು. ಟೆಲಿಸ್ಕೋಪ್ನ ಬೃಹತ್ ಆ್ಯಂಟೆನಾ ಮುರಿದು ಬೀಳುತ್ತಿರುವ ವಿಡಿಯೊ ದೃಶ್ಯವನ್ನು ಬಿಡುಗಡೆ ಮಾಡಿದೆ.
ಅರೆಸಿಬೊ ಟೆಲಿಸ್ಕೋಪ್ ಮೂಲಕ 1974ರಲ್ಲಿ ಮೊದಲ ಬಾರಿಗೆ ಪಲ್ಸರ್ ನಕ್ಷತ್ರಗಳನ್ನು ಪತ್ತೆ ಹಚ್ಚಲಾಗಿತ್ತು. ತಿರುಗುವ ಸಣ್ಣ ಗಾತ್ರದ ನಕ್ಷತ್ರಗಳಾಗಿವೆ ಪಲ್ಸರ್ ನಕ್ಷತ್ರಗಳು. ತಿರುಗುತ್ತಲೇ ಇರುವ ಈ ನಕ್ಷತ್ರಗಳು ಸೂಸುವ ವಿಕಿರಣಗಳು ಭೂಮಿಯ ದಿಶೆಯಲ್ಲಿ ಬಂದಾಗ ಮಾತ್ರ ಅವು ನಮಗೆ ಗೋಚರಿಸುತ್ತದೆ ಎಂಬುದನ್ನು ಇದರ ಮೂಲಕವೇ ಪತ್ತೆಹಚ್ಚಲಾಗಿತ್ತು.
ಈಗ ಬಾಹ್ಯಾಕಾಶದಿಂದ ಬರುವ, ಭೂಮಿಯ ಮೇಲೆ ಕುಳಿತು ಅಪಾಯಗಳ ಬಗ್ಗೆ ಮಾಹಿತಿ ನೀಡುವ ಸಾಧನವು ಮುಗಿದಿದೆ ಎಂಬ ಬಗ್ಗೆ ವಿಜ್ಞಾನಿಗಳು ಚಿಂತಿತರಾಗಿದ್ದಾರೆ. ವಿಜ್ಞಾನಿಗಳು ಅರೆಸಿಬೊ ಮೂಲಕ ಬಾಹ್ಯಾಕಾಶದಲ್ಲಿರುವ ಬೃಹತ್ ಬಾಹ್ಯಾಕಾಶ ಶಿಲೆಗಳನ್ನು ಅಧ್ಯಯನ ಮಾಡುತ್ತಿದ್ದರು.