

ಉರುಗ್ವೆ (ಅಮೆರಿಕ): ಕೆಲವು ಅಧಿಕಾರಿಗಳು 24 ಗಂಟೆಯೂ ಅಲರ್ಟ್ ಆಗಿರಬೇಕಾಗುತ್ತದೆ. ಆದರೆ ಕರ್ತವ್ಯ ನಿಷ್ಠೆ ಮೆರೆಯುವ ಅಧಿಕಾರಿಗಳು ಈ ನಿಯಮವನ್ನು ಚಾಚೂತಪ್ಪದೇ ಪಾಲಿಸುತ್ತಾರೆ. ಎಷ್ಟೋ ವೇಳೆ ಅವರ ಕರ್ತವ್ಯನಿಷ್ಠೆ, ಸಮಯಪ್ರಜ್ಞೆ ಎಷ್ಟೋ ಜನರ ಪ್ರಾಣವನ್ನು ಕಾಪಾಡಲು ಸಹಾಯವಾಗುತ್ತದೆ.
ಅಂಥದ್ದೇ ಒಂದು ಘಟನೆ ಅಮೆರಿಕದ ಉರುಗ್ವೆಯಲ್ಲಿ ನಡೆದಿದೆ. ಮಗನ ಜತೆ ಐಸ್ಕ್ರೀಂ ಸವಿಯಲು ಹೋಗಿದ್ದ ಪೊಲೀಸ್ ಅಧಿಕಾರಿಯೊಬ್ಬರ ಸಮಯಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ.
ತಮ್ಮ ಡ್ಯೂಟಿ ಮುಗಿಸಿ ಮಗನ ಜತೆ ಹೋಗಿದ್ದ ಪೊಲೀಸ್ ಅಧಿಕಾರಿ ಐಸ್ಕ್ರೀಂ ತಿನ್ನುತ್ತಿದ್ದರು. ಅದೇ ವೇಳೆ ಇಬ್ಬರು ದರೋಡೆಕೋರರು ಅಲ್ಲಿಗೆ ಬಂದಿದ್ದಾರೆ. ತಮ್ಮ ಜೇಬಿನಲ್ಲಿದ್ದ ಪಿಸ್ತೂಲ್ ತೆಗೆಯಲು ಅದರಲ್ಲಿ ಒಬ್ಬಾತ ಅಣಿಯಾಗುತ್ತಿದ್ದಂತೆಯೇ ಈ ಪೊಲೀಸ್ ಅಧಿಕಾರಿಗಳಿಗೆ ಅದು ಒಂದೇ ಕ್ಷಣದಲ್ಲಿ ತಿಳಿದುಹೋಗಿದೆ.
ಏನೂ ಯೋಚನೆ ಮಾಡದ ಈ ಅಧಿಕಾರಿ ತಮ್ಮ ಬಳಿ ಇದ್ದ ಪಿಸ್ತೂಲ್ ತೆಗೆದು ಗುಂಡು ಹಾರಿಸಿಯೇ ಬಿಟ್ಟಿದ್ದಾರೆ. ಅಚ್ಚರಿ ಎಂದರೆ ಇನ್ನೊಂದು ಕೈಯಲ್ಲಿ ಅವರು ಐಸ್ಕ್ರೀಂ ಹಿಡಿದೇ ಇದ್ದರು!
ಒಂದು ಕ್ಷಣ ಏನಾಯಿತೆಂದು ತಿಳಿಯದ ದರೋಡೆಕೋರರು ಈ ಅನಿರೀಕ್ಷಿತ ಬೆಳವಣಿಗೆಯಿಂದ ಕಕ್ಕಾಬಿಕ್ಕಿಯಾಗಿ, ಓಡಿಹೋದರು. ಐಸ್ಕ್ರೀಂ ಹಿಡಿದುಕೊಂಡೇ ಪೊಲೀಸ್ ಅಧಿಕಾರಿ ಅವರ ಹಿಂದೆ ಹೋದರು. ಇತ್ತ ಮಗ ಇದೇನು ಮಾಮೂಲು ಎನ್ನುವಂತೆ ಐಸ್ಕ್ರೀಂ ತಿನ್ನುತ್ತಲೇ ಇದ್ದ.
ಇವಿಷ್ಟು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂತರ ಇಬ್ಬರೂ ದರೋಡೆಕೋರರನ್ನು ಪೊಲೀಸ್ ಅಧಿಕಾರಿ ಬಂಧಿಸಿದ್ದಾರೆ. ಬೈಕ್ನಲ್ಲಿ ಬಂದಿದ್ದ ಈ ದರೋಡೆಕೋರರು ಬೈಕ್ ಬಿಟ್ಟು ಓಡಿಹೋಗಿದ್ದರು. ಇನ್ನೊಂದು ಸುತ್ತಿನ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿಯಿಂದಾಗಿ ಒಬ್ಬ ದರೋಡೆಕೋರನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಂತರ ಇನ್ನೊಬ್ಬನೂ ಸಿಕ್ಕಿಬಿದ್ದಿದ್ದಾನೆ.