

ಉಜ್ಜಯಿನಿ (ಮಧ್ಯ ಪ್ರದೇಶ): ಮದುವೆ ಮನೆಯಗಳಲ್ಲಿ ಹಾಸ್ಯಭರಿತ, ದುಃಖಕರ, ವಿಷಾದಕರ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಇವುಗಳ ಪೈಕಿ ಕೆಲವು ವೈರಲ್ ಆಗುತ್ತವೆ. ಅಂಥದ್ದೇ ಒಂದು ವೈರಲ್ ಘಟನೆ ಇದು.
ಇದರಲ್ಲಿ ಆಗಿದ್ದೇನೆಂದರೆ, ಮದುವೆ ಮನೆಯಲ್ಲಿ ಕರೆಂಟ್ ಹೋಗಿ ಕತ್ತಲು ಆವರಿಸಿದ್ದರಿಂದ ವಧು-ವರರೇ ಅದಲು ಬದಲಾಗಿದ್ದಾರೆ. ಅಕ್ಕನ ಗಂಡನಾಗುವವ ತಂಗಿಗೆ, ತಂಗಿಯ ಗಂಡನಾಗುವವ ಅಕ್ಕನಿಗೆ ತಾಳಿ ಕಟ್ಟಿದ್ದಾನೆ!
ಇಂಥದ್ದೊಂದು ಎಡವಟ್ಟು ನಡೆದದ್ದು ಮಧ್ಯಪ್ರದೇಶದ ಉಜ್ಜಯಿನಿಯ ಗ್ರಾಮವೊಂದರಲ್ಲಿ. ಮಳೆಗಾಲದ ಹಿನ್ನೆಲೆಯಲ್ಲಿ ಕರೆಂಟ್ ಹೋಗುವುದು ಇಲ್ಲಿ ಮಾಮೂಲಾಗಿದೆ. ಮದುವೆ ನಡೆಯುತ್ತಿದ್ದ ಸಂದರ್ಭದಲ್ಲಿ ಒಂದೆಡೆ ಮೋಡದಿಂದ ಕತ್ತಲು ಆವರಿಸಿದ್ದರೆ, ಇನ್ನೊಂದೆಡೆ ಪವರ್ ಕಟ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ರಮೇಶ್ಲಾಲ್ ಅವರ ಹೆಣ್ಣುಮಕ್ಕಳಾದ ನಿಖಿತಾ ಮತ್ತು ಕರಿಷ್ಮಾ ಮದುವೆ ಒಂದೇ ಕುಟುಂಬದಲ್ಲಿ ನಡೆಯುತ್ತಿತ್ತು. ಆದರೆ ಮದುವೆ ಮಾತ್ರ ಬೇರೆ ಬೇರೆ ಕುಟುಂಬದ ಯುವಕರಾದ ದಂಗ್ವಾರಾ ಭೋಲಾ ಮತ್ತು ಗಣೇಶ್ ಅವರನ್ನು ವಿವಾಹವಾಗಬೇಕಿತ್ತು. ಸಂಪ್ರದಾಯದ ಪ್ರಕಾರ ಮದುಮಕ್ಕಳು ಮುಸುಕು ಹಾಕಿಕೊಂಡಿದ್ದರು. ಅದೇ ವೇಳೆ ಕರೆಂಟ್ ಕೈಕೊಟ್ಟಿತು.
ಅಕ್ಕ ತಂಗಿ ಒಂದೇ ರೀತಿಯ ಡ್ರೆಸ್ ತೊಟ್ಟಿದ್ದರು. ಇಬ್ಬರೂ ಕೆಂಪು ಬಣ್ಣದ ಲೆಹೆಂಗಾ ಧರಿಸಿದ್ದರು. ಕರೆಂಟ್ ಹೋದ ವೇಳೆ ಎಲ್ಲರೂ ಎದ್ದುನಿಂತಿದ್ದರಿಂದ ಇದೇ ಗಡಿಬಿಡಿಯಲ್ಲಿ ಮದುಮಕ್ಕಳು ಅದಲು ಬದಲಾಗಿದ್ದಾರೆ. ಆದರೆ ಯಾರಿಗೂ ವಿಷಯ ತಿಳಿಯಲಿಲ್ಲ. ಮದುವೆ ನಡೆದುಹೋಗಿದೆ.
ಮದುಮಕ್ಕಳು ಅದಲು ಬದಲಾದದ್ದು ಮಾತ್ರ ಗಮನಕ್ಕೆ ಬಂದದ್ದು ಗಂಡನ ಮನೆಯನ್ನು ನೂತನ ದಂಪತಿ ತಲುಪಿದಾಗ ಲೈಟ್ಗಳು ಆಫ್ ಆದಾಗ ಯಾವುದೇ ಜನರೇಟರ್ ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ ವಿದ್ಯುತ್ ಕಡಿತಗೊಂಡಾಗ ಕತ್ತಲು ಆವರಿಸಿತು. ಬೆಳಕು ಇಲ್ಲದ್ದರಿಂದ ಮುಖ ಸರಿಯಾಗಿ ಕಾಣಿಸದೇ ಹಾಗೂ ವಧುಗಳು ಒಂದೇ ರೀತಿಯ ಉಡುಪು ತೊಟ್ಟಿದ್ದರಿಂದ ಸಂಬಂಧಿಕರು ಸರಿಯಾಗಿ ವಧುಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ.
’ವಿಷಯ ತಿಳಿಯುತ್ತಲೇ ಎರಡೂ ಕುಟುಂಬಗಳ ನಡುವೆ ದೊಡ್ಡ ಜಗಳವಾಗಿದೆ. ಕೂಡಲೇ ಗ್ರಾಮಸ್ಥರು, ಅತಿಥಿಗಳು ಹಾಗೂ ಹಿರಿಯರು ಒಂದಾಗಿ, ಮಾತುಕತೆ ನಡೆಸಿ, ವಿವಾದ ಬಗೆಹರಿಸಿದರು. ಅಂದರೆ ಬದಲಾವಣೆ ಆಗಿದ್ದು ಆಗಲಿ ಎಂದಲ್ಲ, ಬದಲಿಗೆ ಪುನಃ ಪುರೋಹಿತರನ್ನು ಕರೆಯಿಸಿ ಆಯಾ ವಧುವಿಗೆ ಆಯಾ ವರನ ಜತೆ ಸರಿಯಾಗಿ ಮತ್ತೊಮ್ಮೆ ವಿವಾಹ ನೆರವೇರಿಸಲಾಯಿತು ಎಂದು ವರದಿಯಾಗಿದೆ.