

ತುಮಕೂರು: ಇಂದು ನಸುಕಿನದಲ್ಲಿ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಬೆಗೂರು ಬೈಪಾಸ್ ಬಳಿ ಭೀಕರ ಅಪಘಾತ ನಡೆದಿದೆ.
ಕಾರು- ಟಿಟಿ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಇನ್ನೊಬ್ಬರ ಸ್ಥಿತಿ ಗಂಭೀರವಾಗಿದೆ. ಟಿ.ಟಿ.ವಾಹನದಲ್ಲಿದ್ದ 5 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೃತರನ್ನು ರಘು (27) ಮತ್ತು ಸಂತೋಷ (21) ಎಂದು ಗುರುತಿಸಲಾಗಿದೆ. ವಿಜಯ್ (30) ಅವರ ಸ್ಥಿತಿ ಗಂಭೀರವಾಗಿದೆ. ಮೃತಪಟ್ಟವರು ಬೆಂಗಳೂರಿನ ಸಂಜಯ ನಗರದ ನಿವಾಸಿಗಳು.
ಟಿ.ಟಿ. ವಾಹನ ಧರ್ಮಸ್ಥಳದ ಕಡೆಗೆ ಹೋಗುತ್ತಿತ್ತು. ಕಾರು ಡಿವೈಡರ್ ದಾಟಿ ಟಿ.ಟಿ. ವಾಹನಕ್ಕೆ ಡಿಕ್ಕಿ ಹೊಡೆದಿದ್ದು ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದವರು ಚಿಕ್ಕಮಗಳೂರಿನಿಂದ- ಬೆಂಗಳೂರಿಗೆ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.