‘ಅಲ್ಲಾಹು ಅಕ್ಬರ್‌’ ವಿದ್ಯಾರ್ಥಿನಿಗೆ ಆರ್‌ಎಸ್‌ಎಸ್‌ ಮುಸ್ಲಿಂ ಘಟಕದ ಬೆಂಬಲ- ತಮಿಳುನಾಡಿನಿಂದಲೂ ಪ್ರಶಸ್ತಿ

muskan
Published on

ನವದೆಹಲಿ: ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್‌ ಗಲಾಟೆ ರಾಜ್ಯ ದಾಟಿ, ದೇಶವನ್ನೂ ದಾಟಿ ಹೋಗಿದೆ. ಇದೀಗ ಈ ಗಲಾಟೆಯ ನಡುವೆಯೇ ಕೇಳಿಬರುತ್ತಿರುವ ಹೆಸರು ಮಂಡ್ಯದ ಮುಸ್ಕಾನ್​ ಖಾನ್. ಕೇಸರಿ ಶಾಲು ಧರಿಸಿ ಜೈ ಶ್ರೀರಾಮ್​ ಘೋಷಣೆ ಕೂಗಿದವರ ಎದುರು ಅಲ್ಲಾಹು ಅಕ್ಬರ್​ ಎಂದು ಕೂಗಿದ ಈ ವಿದ್ಯಾರ್ಥಿನಿಯ ಧೈರ್ಯಕ್ಕೆ ಇದಾಗಲೇ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಜಮೀಯತ್ ಉಲಮಾ-ಇ-ಹಿಂದ್ ಎಂಬ ಮುಸ್ಲಿಂ ಸಂಘಟನೆ ಬೀಬಿ ಮುಸ್ಕಾನ್ ಖಾನ್​ಗೆ 5 ಲಕ್ಷ ರೂಪಾಯಿ ನಗದನ್ನು ಇದಾಗಲೇ ಘೋಷಣೆ ಮಾಡಿದೆ. ಇದರ ಜತೆಗೆ ತಮಿಳುನಾಡು ಮುಸ್ಲಿಂ ಮುನ್ನೇತ್ರ ಕಳಗಂ(ಟಿಎಂಎಂಕೆ) ಕೂಡ ಪ್ರಶಸ್ತಿ ನೀಡುವುದಾಗಿ ಘೋಷಿಸಿದೆ. ‘ಭಾರತೀಯ ಪ್ರಜೆಯಾಗಿ ತನಗೆ ನೀಡಿದ ಹಕ್ಕನ್ನು ಕಸಿದುಕೊಳ್ಳಲು ಯತ್ನಿಸಿದ ಕೇಸರಿ ದಳದ ಮುಂದೆ ನಿರ್ಭೀತಿಯಿಂದ ನಿಂತು ತನ್ನ ಹಕ್ಕನ್ನು ಪ್ರತಿಪಾದಿಸಿದ ಮುಸ್ಕಾನ್ ಅವರಿಗೆ ಫಾತಿಮಾ ಶೇಖ್ ಪ್ರಶಸ್ತಿಯನ್ನು ನೀಡಲು ಹೆಮ್ಮೆಪಡುತ್ತದೆ’ ಎಂದು ತಮಿಳುನಾಡು ಮುಸ್ಲಿಂ ಮುನ್ನೇತ್ರ ಕಳಗಂ ಹೇಳಿದೆ.

ಇವೆಲ್ಲದರ ನಡುವೆ ಆರ್‌ಎಸ್‌ಎಸ್‌ನ ಮುಸ್ಲಿಂ ಘಟಕ, ಮುಸ್ಲಿಂ ರಾಷ್ಟ್ರೀಯ ಮಂಚ್​ ಕೂಡ ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿನಿಗೆ ಬೆಂಬಲ ವ್ಯಕ್ತಪಡಿಸಿದೆ. ಮುಸ್ಕಾನ್ ಖಾನ್​ ನಮ್ಮ ಸಮುದಾಯದ ಮಗಳು, ಸಹೋದರಿ. ಆಕೆಗೆ ಎದುರಾಗಿರುವ ಕಷ್ಟದ ಸಮಯದಲ್ಲಿ ಅವಳ ಪರ ನಾವು ನಿಲ್ಲುತ್ತೇವೆ ಎಂದು ಮುಸ್ಲಿಂ ಘಟಕದ ಅವಧ್ ಪ್ರಾಂತ್ಯದ ಸಂಚಾಲಕ್​ ಅನಿಲ್​ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹಿಜಾಬ್​ ಎಂಬುದು ಭಾರತೀಯ ಸಂಸ್ಕೃತಿಯ ಒಂದು ಭಾಗ. ನಮ್ಮ ಸಮುದಾಯದ ಈ ಮಗಳಿಗೆ ಎದುರಾಗಿರುವ ಕಷ್ಟದ ಸಮಯದಲ್ಲಿ ಅವಳ ಪರ ನಾವು ನಿಲ್ಲುತ್ತೇವೆ. ಮಹಿಳೆಯರಿಗೆ ಗೌರವ ಕೊಡಬೇಕು ಎಂಬುದನ್ನು ಹಿಂದು ಸಂಸ್ಕೃತಿ ಕಲಿಸಿದೆ. ಆದರೆ ಅಂದು ಈ ಹೆಣ್ಣುಮಗಳ ಎದುರು ಆಕ್ರಮಣಕಾರಿಯಾಗಿ ಜೈ ಶ್ರೀರಾಮ್​ ಘೋಷಣೆ ಮಾಡಿ, ಹೆದರಿಸಲು ನೋಡಿದ್ದು ತಪ್ಪು. ಇದನ್ನು ನಾವು ಖಂಡಿಸುತ್ತೇವೆ ಎಂದು ಸಿಂಗ್‌ ಹೇಳಿದ್ದಾರೆ.

ಹಿಜಾಬ್​ ಧರಿಸಲು ಸಂವಿಧಾನದಲ್ಲೇ ಹಕ್ಕು ನೀಡಲಾಗಿದೆ. ಒಂದು ವೇಳೆ ವಿದ್ಯಾರ್ಥಿನಿ ಏನಾದರೂ ಕಾಲೇಜು ಕ್ಯಾಂಪಸ್​​ನಲ್ಲಿ ಅಲ್ಲಿನ ನಿಯಮ ಉಲ್ಲಂಘಿಸಿದ್ದೇ ಹೌದಾದರೆ ಅದಕ್ಕೆ ಏನು ಶಿಕ್ಷೆ ಎನ್ನುವುದನ್ನು ನೀಡುವ ಹಕ್ಕು ಶಿಕ್ಷಣ ಸಂಸ್ಥೆಗೆ ಇದೆಯೇ ವಿನಾ ಈ ರೀತಿ ಬಿಟ್ಟು ಹುಡುಗರು ಕೇಸರಿ ಶಾಲು ಧರಿಸಿ, ಜೈಶ್ರೀರಾಮ್​ ಎಂದು ಕೂಗುತ್ತ ಬಂದಿದ್ದು ಸರಿಯಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net