ನೌಕಾಪಡೆಯ ನೂತನ ಮುಖ್ಯಸ್ಥರಾಗಿ ವಿಶಿಷ್ಟ ಸೇವಾ ಪದವಿ ಪುರಸ್ಕೃತ ಹರಿ ಕುಮಾರ್ ನೇಮಕ

harikumar
Published on

ನವದೆಹಲಿ: ಭಾರತೀಯ ನೌಕಾಪಡೆಗೆ ವೈಸ್ ಅಡ್ಮಿರಲ್ ಆರ್. ಹರಿ ಕುಮಾರ್ ಅವರನ್ನು ನೌಕಾಸೇನಾಧಿಪತಿಯಾಗಿ (ಮುಖ್ಯಸ್ಥ) ನೇಮಕ ಮಾಡಲಾಗಿದೆ. ಇವರು ಇಂದು ಅಧಿಕಾರ ಸ್ವೀಕರಿಸಲಿದ್ದಾರೆ. ಇವರು ಪಶ್ಚಿಮ ನೇವಲ್ ಕಮಾಂಡ್ ಕಮಾಂಡಿಂಗ್ ಇನ್ ಚೀಫ್ (ಎಫ್‍ಒಸಿ-ಇನ್-ಸಿ) ಫ್ಲಾಗ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಭಾರತೀಯ ನೌಕಾಪಡೆಯ ಅಡ್ಮಿರಲ್ ಕರಂಬಿರ್ ಸಿಂಗ್ ಅವರ ಜಾಗಕ್ಕೆ ಈಗ ಹರಿ ಕುಮಾರ್‌ ನೇಮಕಗೊಂಡಿದ್ದಾರೆ. 39 ವರ್ಷಗಳ ವೃತ್ತಿ ಜೀವನದಲ್ಲಿ ಹರಿ ಕುಮಾರ್ ಅವರು ವಿವಿಧ ಕಮಾಂಡರ್, ಸಿಬ್ಬಂದಿ ಮತ್ತು ಬೋಧನಾ ನೇಮಕಾತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಐಎನ್‍ಎಸ್ ವಿಕ್ರಮಾದಿತ್ಯದ ಸಾಗರೋತ್ತರ ಸಮಿತಿಯ ಮುಖ್ಯಸ್ಥರೂ ಆಗಿದ್ದ ಹರಿ ಕುಮಾರ್‌, ಗೋವಾದ ನೌಕಾ ಯುದ್ಧ ಕಾಲೇಜಿನ ಕಮಾಂಡೆಂಟ್ ಆಗಿದ್ದರು. ಈ ಮೂಲಕ ಈ ಹುದ್ದೆಯನ್ನು ಏರಿರುವ ಮೊದಲ ಫ್ಲ್ಯಾಗ್ ಆಫೀಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹರಿ ಕುಮಾರ್ ಅವರ ಪರಿಚಯ:
ಹರಿ ಕುಮಾರ್ ಅವರು 1962ರ ಏಪ್ರಿಲ್ 12ರಂದು ಜನಿಸಿದರು. 1981ರ ಡಿಸೆಂಬರ್ ನಲ್ಲಿ ಎ-ಸ್ಕ್ವಾಡ್ರನ್, 61 ಕೋರ್ಸ್ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಿಂದ ಪದವಿ ಪಡೆದ ಇವರು 1983ರ ಜನವರಿ 1ರಂದು ನೌಕಾಪಡೆಯ ಕಾರ್ಯನಿರ್ವಾಹಕ ಶಾಖೆಗೆ ನೇಮಕಗೊಂಡರು.

ನಂತರ ವೆಸ್ಟ್ರೆರ್ನ್ ಫ್ಲೀಟ್‍ನ ಫ್ಲೀಟ್ ಆಪರೇಷನ್ ಅಧಿಕಾರಿಯಾಗಿ ನೇಮಕಗೊಂಡ ಇವರು, ಅಮೆರಿಕದ ನೇವಲ್ ವಾರ್ ಕಾಲೇಜು, ಮಧ್ಯಪ್ರದೇಶದ ಆರ್ಮಿ ವಾರ್ ಕಾಲೇಜು ಮತ್ತು ಲಂಡನ್‌ನ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್‍ನಲ್ಲಿ ವಿವಿಧ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಇವರ ಅಮೋಘ ಸೇವೆಗೆ ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಮತ್ತು ವಿಶಿಷ್ಟ ಸೇವಾ ಪದಕವನ್ನು ಲಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net