

ಬೆಂಗಳೂರು: ಆಗಸದಲ್ಲಿ ನಡೆಯುವ ಕೌತುಕಗಳು ಅಷ್ಟಿಷ್ಟಲ್ಲ. ಕೆಲವೊಮ್ಮೆ ಈ ವಿಸ್ಮಯಗಳು ನಮ್ಮ ಕಣ್ಣಿಗೆ ಕಾಣಿಸುತ್ತವೆ. ಅಂಥದ್ದೇ ಒಂದು ವಿಸ್ಮಯ ಇದೀಗ ಆಕಾಶದಲ್ಲಿ ನಡೆಯುತ್ತಿದೆ.
ಸೂರ್ಯನ ಸುತ್ತಲೂ ಕಾಮನಬಿಲ್ಲಿನ ಆಕೃತಿಯ ಉಂಗುರ ಕಾಣಿಸುತ್ತಿದೆ. ಇದನ್ನು ಇಂಗ್ಲಿಷ್ನಲ್ಲಿ ಹ್ಯಾಲೋಸ್ ಎಂದು ಕರೆಯುತ್ತಾರೆ. ಸೂರ್ಯನಿಗೆ ಕೈಯನ್ನು ಅಡ್ಡವಾಗಿಟ್ಟುಕೊಂಡು ನೋಡಿದರೆ ಈ ದೃಶ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ಈ ಸೂರ್ಯನ ಸುತ್ತಲಿರುವ ಉಂಗುರದ ಒಳಭಾಗದಲ್ಲಿ ಕೆಂಪು ಮತ್ತು ಹೊರಭಾಗದಲ್ಲಿ ನೀಲಿ ಬಣ್ಣ ಕಾಣಿಸುತ್ತದೆ. ಆಯಾ ಊರುಗಳ ಹವಾಮಾನಕ್ಕೆ ತಕ್ಕಂತೆ ಇದು ಗೋಚಾರವಾಗುತ್ತದೆ. ಬೆಂಗಳೂರು ಸೇರಿದಂತೆ ಕೆಲವು ಊರುಗಳಲ್ಲಿ ಈ ದೃಶ್ಯವನ್ನು ಈಗಲೇ ಕಣ್ತುಂಬಿಸಿಕೊಳ್ಳಬಹುದಾಗಿದೆ.
ಇಂಥದ್ದೊಂದು ಸುಂದರ ದೃಶ್ಯ ಮಳೆಗಾಲದ ಆರಂಭದ ದಿನಗಳಲ್ಲಿ ಅಪರೂಪವಾಗಿ ಕಾಣಬಹುದಾಗಿದೆ. ಹಿಮಾಲಯದಲ್ಲಿ ಈ ದೃಶ್ಯ ಸರ್ವೇ ಸಾಮಾನ್ಯ. ಅಷ್ಟಕ್ಕೂ ಈ ರೀತಿಯ ಉಂಗುರ ಸೃಷ್ಟಿಯಾಗಲು ಕಾರಣವೆಂದರೆ ಮಳೆಗಾಲದಲ್ಲಿ ಮಳೆಹನಿಯ ಕಣಗಳನ್ನು ಮೋಡಗಳು ತುಂಬಿಕೊಂಡಾಗ ಸೂರ್ಯನ ಕಿರಣಗಳು ಆ ಮಳೆ ಹನಿಯ ಕ್ರಿಸ್ಟಲ್ ಕಣಗಳ ಮೇಲೆ ಬೀಳುತ್ತವೆ. ಈ ಸಮಯದಲ್ಲಿ ವಕ್ರೀಭವನ ಉಂಟಾಗಿ ಈ ದೃಶ್ಯ ಕಾಣಸಿಗುತ್ತದೆ.
ಸುಪ್ರಸಿದ್ಧ ವಿಜ್ಞಾನಿ ಅರಿಸ್ಟಾಟಲ್ ಹ್ಯಾಲೋಸ್ ಬಗ್ಗೆ ಮೊದಲ ಬಾರಿಗೆ ಪ್ರಸ್ತಾಪಿಸಿದ್ದ. 1630ರಲ್ಲಿ ಯುರೋಪ್ನ ವಿಜ್ಞಾನಿ ಕ್ರಿಸ್ಟೋಫ್ ಶೀನರ್ ಇವುಗಳ ಕುರಿತಂತೆ ಸಾಕಷ್ಟು ಅಧ್ಯಯನ ವರದಿ ನೀಡಿದ್ದ. ಚೀನಾದ ಪುರಾತನ ಖಗೋಳಶಾಸ್ತ್ರಜ್ಞರು ಇದನ್ನು ಶತಮಾನಗಳ ಕಾಲ ಅಧ್ಯಯನ ಮಾಡಿದ ಬಳಿಕ ಈ ಉಂಗುರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ದೊರೆತಿದ್ದವು.