

ವಾರಾಣಸಿ: ಇತ್ತೀಚಿನ ದಿನಗಳಲ್ಲಿ ಚಿಕ್ಕಪುಟ್ಟ ಕಾರಣಕ್ಕೂ ಹಿಂದೂಗಳ ಮೇಲೆ ಕೊಲೆ ಬೆದರಿಕೆ ಆಗುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಸಾಗಿವೆ. ಇದೀಗ ಜ್ಞಾನವಾಪಿ ಕೇಸ್ ಮೇಲೆ ಪಾಕಿಸ್ತಾನಿಗಳ ಕಣ್ಣು ಬಿದ್ದಿದೆ. ಜ್ಞಾನವಾಪಿ ಮಸೀದಿ ಕುರಿತು ಅರ್ಜಿ ಸಲ್ಲಿಸಿರುವ ಕುಟುಂಬಕ್ಕೆ ಹಾಗೂ ದೇವಾಲಯದ ಪರ ವಕೀಲ ಡಾ.ಸೋನಾಲಾಲ್ ಆರ್ಯ ಅವರಿಗೆ ಪಾಕಿಸ್ತಾನದಿಂದ ಜೀವ ಬೆದರಿಕೆ ಕರೆ ಬಂದಿದೆ.
ವಾರಣಾಸಿಯ ಶೃಂಗಾರಗೌರಿ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಆದ ಬಳಿಕ ಅದಕ್ಕೆ ಪೂಜೆ ಸಲ್ಲಿಸಲು ಅನುಮತಿ ಕೋರಿ ಐವರು ಮಹಿಳೆಯರು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಮಹಿಳೆಯರ ಪೈಕಿ ಲಕ್ಷ್ಮೀದೇವಿ ಎನ್ನುವವರ ಕುಟುಂಬಕ್ಕೆ ಈಗ ಶಿರಚ್ಛೇದದ ಬೆದರಿಕೆ ಹಾಕಲಾಗಿದೆ. ಇವರ ಪತಿಗೆ ಪಾಕಿಸ್ತಾನದ ಸಂಖ್ಯೆಯಿಂದ ಕರೆ ಬಂದಿದ್ದು, ಪ್ರಕರಣದ ಅರ್ಜಿಯನ್ನು ವಾಪಸ್ ಪಡೆಯಲು ಒತ್ತಡ ಹೇರಲಾಗಿದೆ.
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ಕೇಸ್ ಕುರಿತು ಇಂದು ವಾರಾಣಸಿ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ಅದಕ್ಕೂ ಮೊದಲು ಈ ಬೆದರಿಕೆ ಕರೆ ಮಾಡಲಾಗಿದೆ.
ಒಂದು ವೇಳೆ ಈ ಕೇಸ್ ವಾಪಸ್ ಪಡೆಯದಿದ್ದರೆ ಶಿರಚ್ಛೇದ ಮಾಡಲಾಗುವುದು ಎಂದು ಬೆದರಿಕೆ ಹಾಕಲಾಗಿದೆ. ಮಾರ್ಚ್ 19, ಜುಲೈ 20 ಅಪರಿಚಿತ ವ್ಯಕ್ತಿಯೊಬ್ಬ ತನಗೆ ಕರೆ ಮಾಡಿದ್ದ. ಅದು ಪಾಕಿಸ್ತಾನದ ಸಂಖ್ಯೆಯಾಗಿದೆ. ಕರೆ ಸ್ವೀಕರಿಸಿದಾಗ, ಅರ್ಜಿ ವಾಪಸ್ ಪಡೆಯದಿದ್ದರೆ ರಾಜಸ್ಥಾನದ ಕನ್ಹಯ್ಯಾ ಲಾಲ್ನ ತಲೆ ಕಡಿದಂತೆ ನಿನ್ನ ಶಿರಚ್ಚೇದ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದಾನೆ ಎಂದು ಲಕ್ಷ್ಮೀದೇವಿ ಅವರ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
'ಇದೇ 3ನೇ ತಾರೀಖಿನಂದು ಅದೇ ನಂಬರ್ನಿಂದ ಮಿಸ್ಡ್ ಕಾಲ್ ಬಂದಿದೆ' ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಬೆದರಿಕೆ ಕರೆಗಳು ಮುಂದುವರೆದಿದ್ದರಿಂದ ಪೊಲೀಸ್ ಕಮಿಷನರ್ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ಅವರು ಹೇಳಿದ್ದಾರೆ. ದೂರಿಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ.
ಇಂದು ಅರ್ಜಿಯ ವಿಚಾರಣೆ ಇರುವ ಹಿನ್ನೆಲೆಯಲ್ಲಿ ದೇವಾಲಯದ ಪರ ವಾದಿಸುತ್ತಿರುವ ವಕೀಲ ಡಾ.ಸೋನಾಲಾಲ್ ಆರ್ಯ ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ. ಆದರೆ ಯಾವುದೇ ಬೆದರಿಕೆಗೂ ನಾವು ಜಗ್ಗುವುದಿಲ್ಲ ಎಂದು ವಕೀಲರು ಹೇಳಿದ್ದಾರೆ (ಏಜೆನ್ಸೀಸ್)