ಆಡಳಿತ ಪಕ್ಷ ಮೊಟ್ಟೆ ತಿನ್ನಲ್ಲ ಎಂದು ವ್ಯಾಪಾರಿಗಳನ್ನು ಎತ್ತಂಗಡಿ ಮಾಡ್ತೀರಾ? ಯಾರು ಏನು ತಿನ್ನಬೇಕೆಂದು ನೀವ್ಹೇಗೆ ನಿರ್ಧರಿಸುತ್ತೀರಿ? ಹೈಕೋರ್ಟ್‌ ತರಾಟೆ

Gujarath
Published on

ಅಹಮದಾಬಾದ್: ಬೀದಿಬದಿಗಳಲ್ಲಿ ತಳ್ಳುಗಾಡಿಗಳಲ್ಲಿ ಮಾಂಸಾಹಾರದ ಮಾರಾಟವನ್ನು ನಿಷೇಧಿಸಿರುವ ಗುಜರಾತ್‌ ಸರ್ಕಾರದ ಕ್ರಮಕ್ಕೆ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಸುಮಾರು 25 ಬೀದಿ ವ್ಯಾಪಾರಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌, ಪಾಲಿಕೆಯ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ವಡೋದರಾ, ಸೂರತ್, ಭಾವನಗರ, ಜುನಾಗಢ ಮತ್ತು ಅಹಮದಾಬಾದ್‌ನಲ್ಲಿ ಬೀದಿ ಬದಿಯಲ್ಲಿ ಮಾಂಸಾಹಾರ ಮಾರಾಟ ಮಾಡದಂತೆ ಈ ಹಿಂದೆ ಪಾಲಿಕೆ ಆದೇಶಿಸಿತ್ತು. ಇದನ್ನು ಉಲ್ಲಂಘಿಸಿರುವವರ ಗಾಡಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಇದರ ವಿರುದ್ಧ ವ್ಯಾಪಾರಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು. ಅದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರು, ಬೀದಿ ಬದಿ ಮಾಂಸಾಹಾರ ವ್ಯಾಪಾರ ಮಾಡಿದರೆ ನಿಮಗೇನು ಸಮಸ್ಯೆ? ಕೆಲವರು ಮಾಂಸಾಹಾರ ಇಷ್ಟಪಡುವುದಿಲ್ಲ ನಿಜ. ಹಾಗೆಂದು ಯಾರು ಮನೆಯ ಹೊರಗೆ ಏನನ್ನು ತಿನ್ನಬೇಕು ಎಂದು ನೀವು ನಿರ್ಧರಿಸಲು ಆಗುತ್ತದೆಯೆ? ನಾವೇನು ತಿನ್ನಬೇಕು ಎಂದು ಪಾಲಿಕೆಗೆ ಅವರು ಕರೆ ಮಾಡಿ ಕೇಳಬೇಕಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಸಕ್ಕರೆ ಕಾಯಿಲೆ ಬರುತ್ತದೆ, ಅದಕ್ಕೆ ಕಬ್ಬಿನ ರಸ ಒಳ್ಳೆಯದಲ್ಲ, ಕಾಫಿ ಆರೋಗ್ಯಕ್ಕೆ ಹಾನಿಕಾರಕ ಎಂದೋ ಯಾರಾದರೂ ಹೇಳಿದರೆ ಆ ವ್ಯಾಪಾರವನ್ನೂ ಬೀದಿ ಬದಿ ಸ್ಟಾಪ್‌ ಮಾಡುವಿರಾ ಎಂದು ಸರ್ಕಾರದ ಪರ ವಕೀಲರನ್ನು ನ್ಯಾಯಮೂರ್ತಿಗಳು ಪ್ರಶ್ನಿಸಿದರು.

ಯಾರಾದರೂ ಕೆಲವು ಪ್ರದೇಶಗಳಲ್ಲಿ ಮೊಟ್ಟೆ ಮಾರಾಟ ಮಾಡುತ್ತಿದ್ದರೆ, ಆಡಳಿತ ಪಕ್ಷವು ಮೊಟ್ಟೆ ತಿನ್ನಲ್ಲ ಎಂದು ಅವರನ್ನೂ ಎತ್ತಂಗಡಿ ಮಾಡಿಸುವಿರಾ? ಎಂದು ಖಾರವಾಗಿ ಪ್ರಶ್ನಿಸಿದ ನ್ಯಾಯಮೂರ್ತಿಗಳು ಇಂಥ ಕ್ರಮವನ್ನು ನಾವು ಸಹಿಸುವುದಿಲ್ಲ ಎಂದರು.

ಇದಕ್ಕೆ ಸಮಜಾಯಿಷಿ ನೀಡಿದ ಸರ್ಕಾರದ ಪರ ವಕೀಲರು, ಅಧಿಕಾರಿಗಳು ಎಲ್ಲಾ ಅಂಗಡಿಗಳನ್ನು ತೆರವು ಮಾಡಲು ಆದೇಶಿಸಿಲ್ಲ, ಬದಲಿಗೆ ಕೆಲವು ಜಾಗವನ್ನು ಅತಿಕ್ರಮಿಸಿಕೊಂಡು ಅಲ್ಲಿ ವ್ಯಾಪಾರ ಮಾಡಲಾಗುತ್ತಿತ್ತು. ಅಂಥ ವ್ಯಾಪಾರಸ್ಥರಿಗೆ ಮಾತ್ರ ಜಾಗ ತೆರವು ಮಾಡಲು ಆದೇಶಿಸಲಾಗಿದೆ ಎಂದು ಹೇಳಿದರು. ಅದಕ್ಕೆ ಸಂಬಂಧಿಸಿದ ಕೆಲವೊಂದು ದಾಖಲೆಗಳನ್ನು ನೀಡಿದರು.

ಅದಕ್ಕೆ ನ್ಯಾಯಮೂರ್ತಿಗಳು ಒಂದು ವೇಳೆ ಇದು ನಿಜವೇ ಆಗಿದ್ದರೆ ಅಂಥವರು ಅತಿಕ್ರಮಣ ಮಾಡಿಕೊಂಡಿರುವುದು ಸರಿಯಲ್ಲ. ಆದರೆ ಎಲ್ಲರಿಗೂ ಈ ರೀತಿ ಸೂಚನೆ ನೀಡಿದ್ದರೆ ಅದು ತಪ್ಪು ಎಂದು ಹೇಳುವ ಮೂಲಕ ಅರ್ಜಿದಾರರ ಗಾಡಿಗಳನ್ನು 24 ಗಂಟೆಗಳೊಳಗೆ ಬಿಟ್ಟಕೊಡುವ ಬಗ್ಗೆ ಪರಿಶೀಲಿಸಿ, ಅವರು ಅತಿಕ್ರಮಣ ಮಾಡಿಕೊಳ್ಳದೇ ಹೋಗಿದ್ದರೆ ಅವರ ಗಾಡಿ ವಾಪಸ್‌ ಕೊಡಿ ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ಪಾಲಿಕೆ ಆಯುಕ್ತರ ಹಾಜರಿಗೆ ಆದೇಶಿಸಿದ ನ್ಯಾಯಮೂರ್ತಿಗಳು ವಿಚಾರಣೆ ಮುಂದೂಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net