

ಅಹಮದಾಬಾದ್: ಕರೊನಾ ವೈರಸ್ ಹಿನ್ನೆಲೆಯಲ್ಲಿ ಎಲ್ಲಾ ಕೋರ್ಟ್ಗಳೂ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ್ದವು. ಇದೀಗ ಕೆಲವು ಕೋರ್ಟ್ಗಳು ಕಲಾಪ ಆರಂಭಿಸಿದ್ದರೂ ಇನ್ನು ಕೆಲವೆಡೆ ಕೋರ್ಟ್ಗಳು ತೆರೆದಿಲ್ಲ.
ಇದೇ ಸಮಯದಲ್ಲಿ, ವಿಚಾರಣೆ ವೇಳೆ ಹಲವಾರು ವಕೀಲರು ಅಸಂಬದ್ಧ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ವರದಿಯಾಗಿದೆ. ಮನೆಯಲ್ಲಿರುವ ಡ್ರೆಸ್ ಹಾಕಿಕೊಂಡು, ಟೀ ಸೇವನೆ ಮಾಡುತ್ತಾ, ಕಾರು ಚಲಾಯಿಸುತ್ತಾ... ಹೀಗೆ ವಕೀಲಿ ವೃತ್ತಿಗೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಂಡಿರುವ ಬಗ್ಗೆ ಕೆಲವು ಕಡೆಗಳಲ್ಲಿ ವರದಿಯಾಗಿದೆ.
ಅದರಂತೆಯೇ ಜೆ.ವಿ.ಅಜ್ಮೇರಾ ಎಂಬ ಅಹಮದಾಬಾದ್ ವಕೀಲನೊಬ್ಬ, ಕಾರು ಚಲಾಯಿಸುತ್ತಾ ವಿಚಾರಣೆ ಹಾಜರಾಗಿದ್ದು ಮಾತ್ರವಲ್ಲದೇ, ವಿಚಾರಣೆ ಸಂದರ್ಭದಲ್ಲಿಯೇ ಧೂಮಪಾನ ಮಾಡುತ್ತಿದ್ದರು. ಇದನ್ನು ಗಮನಿಸಿದ ನ್ಯಾಯಮೂರ್ತಿ ಎ.ಎಸ್.ಸುಪೇಹಿಯಾ ಕೆಂಡಾಮಂಡಲವಾಗಿದ್ದಾರೆ.
ವಕೀಲಿ ವೃತ್ತಿಗೆ ಈ ರೀತಿ ಅವಹೇಳನ ಮಾಡುವ, ಈ ವೃತ್ತಿಯ ಮರ್ಯಾದೆ ಕಳೆಯುತ್ತಿರುವುದು ತುಂಬಾ ವಿಷಾದಕರ ಎಂದಿರುವ ನ್ಯಾಯಮೂರ್ತಿಗಳು ಅಜ್ಮೇರಾ ಅವರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಇದೊಂದು ಅತ್ಯಂತ ಬೇಜವಾಬ್ದಾರಿಯ ವರ್ತನೆ. ವಕೀಲರ ಇಂತಹ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಖಂಡಿಸುವ ಅಗತ್ಯವಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟರು.
ಒಡಿಶಾ ಹೈಕೋರ್ಟ್ನಲ್ಲಿ ವಕೀಲರೊಬ್ಬರು ಕಾರು ಚಲಾಯಿಸಿಕೊಂಡು ವಾದ ಮಾಡುತ್ತಿದ್ದರೆ, ಮದುವೆಯಾಗಿರುವ ವಕೀಲರೊಬ್ಬರು ತಮ್ಮ ಪತ್ನಿಯನ್ನು ಪಕ್ಕದಲ್ಲಿಯೇ ಕುಳ್ಳರಿಸಿಕೊಂಡಿದ್ದರು. ಇದು ಕೋರ್ಟ್ಗೆ ಮಾಡುವ ಅವಮರ್ಯಾದೆ. ಪತ್ನಿಯನ್ನು ಕಳಿಸಿ ಎಂದು ನ್ಯಾಯಮೂರ್ತಿಗಳು ಹೇಳಿದರೂ ವಕೀಲರು ಕೇಳಿರಲಿಲ್ಲ.
ಇನ್ನೊಂದು ಪ್ರಕರಣದಲ್ಲಿ ವಕೀಲರು ಬನಿಯನ್ನಲ್ಲಿಯೇ ಇದ್ದು ತೋಟದಲ್ಲಿ ಅಡ್ಡಾಡಿಕೊಂಡು ವಿಚಾರಣೆಗೆ ಹಾಜರಾಗಿದ್ದರು. ನ್ಯಾಯಮೂರ್ತಿಗಳು ಅವರನ್ನು ತರಾಟೆಗೆ ತೆಗೆದುಕೊಂಡಾಗ ಮನೆಯೊಳಕ್ಕೆ ನೆಟ್ವರ್ಕ್ ಸಿಗುತ್ತಿಲ್ಲ ಎಂದರು. ನಂತರ ಈ ವಕೀಲರು ಸುಳ್ಳು ಹೇಳುತ್ತಿರುವುದು ನ್ಯಾಯಮೂರ್ತಿಗಳ ಗಮನಕ್ಕೆ ಬಂದು ತರಾಟೆಗೆ ತೆಗೆದುಕೊಂಡಿದ್ದರು. ಇನ್ನೊಬ್ಬ ವಕೀಲರು ವೀಡಿಯೊ ಕಾನ್ಫರೆನ್ಸ್ ನಡೆಯುತ್ತಿರುವಾಗಲೇ ಪ್ಲೇಟ್ನಲ್ಲಿ ತಿಂಡಿ ಇಟ್ಟುಕೊಂಡು ತಿನ್ನುತ್ತಿದ್ದರು.
ಹಿರಿಯ ವಕೀಲ ರಾಜೀವ್ ಧವನ್ ಕೂಡ ಧೂಮಪಾನ ಮಾಡುತ್ತಿದ್ದುದು ಹಾಗೂ ಇನ್ನೊಬ್ಬ ವಕೀಲ ಗುಟ್ಕಾ ತಿನ್ನುತ್ತ ವಿಚಾರಣೆಗೆ ಹಾಜರಾಗಿ ಸುಪ್ರೀಂಕೋರ್ಟ್ನಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಕೆಲವು ಕಡೆ ಕಪ್ಪು ಸಮವಸ್ತ್ರ ಧರಿಸಿ ವಿಚಾರಣೆಗೆ ಬರುವುದರಿಂದ ವಿನಾಯಿತಿ ನೀಡಲಾಗಿತ್ತು. ಇದನ್ನೇ ಬಳಸಿಕೊಂಡ ವಕೀಲರು ಮನೆಯ ಡ್ರೆಸ್ನಲ್ಲಿಯೇ ಇದ್ದರು. ಇದರಿಂದ ಕಿಡಿ ಕಾರಿದ್ದ ರಾಜಸ್ಥಾನ ಹೈಕೋರ್ಟ್, ಸಮವಸ್ತ್ರದಲ್ಲಿ ಹಾಜರಾಗುವಂತೆ ಸೂಚನೆ ನೀಡಿತ್ತು. ಹೀಗೆ ಅನೇಕ ವಕೀಲರು ನಡೆದುಕೊಂಡಿದ್ದಾರೆ.