

ನವದೆಹಲಿ: ಕರೊನಾ ಸೋಂಕನ್ನು ತಡೆಯಲು ಸರ್ಕಾರಗಳು ಹಲವಾರು ಪ್ರಯತ್ನಗಳನ್ನು ನಡೆಸುತ್ತಿದೆ. ಇದರ ನಡುವೆಯೇ ಇದಾಗಲೇ ಭಾರತದಲ್ಲಿ ಕೊವ್ಯಾಕ್ಸಿನ್ ಲಸಿಕೆ ಕಂಡುಹಿಡಿಯಲಾಗಿದ್ದು, ಎರಡು ಕೋಟಿಗೂ ಅಧಿಕ ಮಂದಿ ಈ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಸೋಂಕನ್ನು ತಡೆಗಟ್ಟಲು ಈ ಲಸಿಕೆ ಅತ್ಯಂತ ಪರಿಣಾಮಕಾರಿಯೆಂದು ಇದಾಗಲೇ ಸಾಬೀತು ಕೂಡ ಆಗಿದೆ.
ಯಾವುದೇ ಔಷಧ ಎಷ್ಟೇ ಜನರ ಪ್ರಾಣವನ್ನು ಉಳಿಸಿರಲಿ, ಅದು ಕೋಟಿ ಕೋಟಿ ಜನರ ಜೀವವನ್ನು ನೀಡಿರಲಿ... ನಿಯಮದ ಪ್ರಕಾರ ಔಷಧಗಳನ್ನು ಬಳಸಲು ವಿಶ್ವ ಆರೋಗ್ಯ ಸಂಸ್ಥೆ (WHO) ಅನುಮೋದನೆ ನೀಡಬೇಕು. ಇದು ಸದ್ಯ ಇರುವ ಪರಿಸ್ಥಿತಿ. ಕರೊನಾ ಸೇರಿದಂತೆ ಎಷ್ಟೋ ಸೋಂಕುಗಳಿಗೆ ಅಲ್ಲಲ್ಲಿ ಹಲವಾರು ಮಂದಿ ತಮ್ಮದೇ ಆದ ವೈದ್ಯಕೀಯ ಪದ್ಧತಿಯಿಂದ ಔಷಧಗಳನ್ನು ನೀಡುತ್ತಿದ್ದು, ಇದರಿಂದ ಹಲವಾರು ಪ್ರಾಣಗಳು ಉಳಿಯುತ್ತಿವೆ, ಸಾವಿನ ದವಡೆಯಲ್ಲಿ ಸಿಲುಕಿದವರನ್ನೂ ಕಾಪಾಡುತ್ತಿದೆ ಎನ್ನುವುದು ಸತ್ಯವಾದರೂ, ಕಾನೂನು ಹಾಗೂ ನಿಯಮಗಳ ಪ್ರಕಾರ ಅವುಗಳಿಗೆ ಸಂಬಂಧಿತ ಇಲಾಖೆ, ಸಂಸ್ಥೆಗಳ ಅನುಮೋದನೆ ಇದ್ದರಷ್ಟೇ ಬೆಲೆ.
ಇದೀಗ ಅದೇ ಸಂಕಷ್ಟದಲ್ಲಿ ಕೊವ್ಯಾಕ್ಸಿನ್ ಕೂಡ ಸೇರಿದೆ. ಕಾರಣ, ವಿಶ್ವ ಆರೋಗ್ಯ ಸಂಸ್ಥೆ ಇದಕ್ಕಿನ್ನೂ ಅನುಮೋದನೆ ನೀಡಲಿಲ್ಲ! ಆದ್ದರಿಂದ ಇದೀಗ ಕೇಂದ್ರ ಸರ್ಕಾರ ಇದಕ್ಕಾಗಿ ಪ್ರಯತ್ನ ನಡೆಸುತ್ತಿದೆ.
ಇದಕ್ಕೆ ಅನುಮೋದನೆ ಇಲ್ಲದ ಕಾರಣ ಲಸಿಕೆ ಪಡೆದವರು ಇತರ ದೇಶಗಳಿಗೆ ಹೋಗಲು ಅಡ್ಡಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಬೇಗನೆ ಅನುಮೋದನೆ ಪಡೆದುಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸಿದೆ ಎನ್ನಲಾಗಿದೆ.
ಕೆಲವು ದೇಶಗಳು ಕೊವ್ಯಾಕ್ಸಿನ್ ಲಸಿಕೆಗೆ ಅನುಮೋದಿಸಿವೆ. 40 ಹೆಚ್ಚು ದೇಶಗಳು ಕೊವ್ಯಾಕ್ಸಿನ್ ಬಗ್ಗೆ ಆಸಕ್ತಿ ತೋರಿವೆ. ಆದರೆ, ಲಸಿಕೆ ರಫ್ತಿಗೆ ಸಿದ್ಧವಾದ ನಂತರ ಇನ್ನೂ ಅನೇಕ ದೇಶಗಳು ಅನುಸರಿಸುವ ಸಾಧ್ಯತೆ ಇದೆ. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕೊವ್ಯಾಕ್ಸಿನ್ ಅನುಮೋದನೆ ಪಡೆಯುವುದು ಬಾಕಿ ಉಳಿದಿದೆ. ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸರ್ಕಾರ ಭಾರತ್ ಬಯೋಟೆಕ್ ಜತೆಗೂಡಿ ಕೆಲಸ ಮಾಡಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.