

ನವದೆಹಲಿ: ಬಿಜೆಪಿ ನಾಯಕ, ಮಾಜಿ ಸಂಸದ ಜೀತೇಂದ್ರ ರೆಡ್ಡಿ ಅವರ ಮನೆಯಿಂದ ನಾಲ್ವರು ಸಿಬ್ಬಂದಿಯನ್ನು ಅಪಹರಣ ಮಾಡಲಾಗಿದ್ದು, ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.
ತೆಲಂಗಾಣ-ಆಂಧ್ರಪ್ರದೇಶದ ಮಾಜಿ ಸಂಸದರೂ ಆದ ಜೀತೇಂದ್ರ ರೆಡ್ಡಿ ಅವರ ದೆಹಲಿಯಲ್ಲಿ ಇರುವ ನಿವಾಸದಿಂದ ಈ ಸಿಬ್ಬಂದಿಯನ್ನು ಅಪಹರಿಸಲಾಗಿದೆ. ಕಾರು ಚಾಲಕ ಸೇರಿ ನಾಲ್ವರನ್ನು ಅಪಹರಣ ಮಾಡಲಾಗಿದೆ.
ಕಾರಿನಲ್ಲಿ ಬಂದ ಅಪರಿಚಿತ ಬಂದೂಕುಧಾರಿಗಳು ಕಾರು ಚಾಲಕ ತಾಪಾ ಮತ್ತು ಸಿಬ್ಬಂದಿ ಮುನ್ನೂರು ರವಿ ಸೇರಿ ನಾಲ್ವರ ತಲೆಗೆ ಬಂದೂಕು ಇಟ್ಟು ಅಪಹರಿಸಿದ್ದು ಇದು ಸಿಸಿಟಿವಿಯಲ್ಲಿ ದಾಖಲಾಗಿದೆ. ಕಳೆದ ಸೋಮವಾರದಂದು (ಫೆ.28) ಈ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಖುದ್ದು ಜೀತೇಂದ್ರ ರೆಡ್ಡಿ ತಮ್ಮ ಟ್ವೀಟ್ ಮಾಡಿದ್ದಾರೆ. ಅವರು ಸಿಸಿಟಿವಿಯ ದೃಶ್ಯಗಳ ಸಮೇತ ಶೇರ್ ಮಾಡಿದ್ದಾರೆ. ನನ್ನ ಖಾಸಗಿ ಕಾರಿನ ಚಾಲಕ ತಾಪಾ ಮತ್ತು ಸಾಮಾಜಿಕ ಕಾರ್ಯಕರ್ತ ಮುನ್ನೂರು ರವಿ ಸೇರಿದಂತೆ ನಾಲ್ವರನ್ನು ಅಪಹರಣ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ. ತಕ್ಷಣವೇ ಪೊಲೀಸರು ಕ್ರಮ ಕೈಗೊಂಡು ನ್ಯಾಯ ಕೊಡಿಸುವ ವಿಶ್ವಾಸ ಹೊಂದಿದ್ದೇನೆ ಎಂದು ಅವರು ಟ್ವಿಟರ್ನಲ್ಲಿ ಹೇಳಿದ್ದಾರೆ.