ನಾಲ್ವರನ್ನು ಬಲಿಪಡೆದ ಸೊಳ್ಳೆಬತ್ತಿ! ಕಿಡಿ ಹಾರಿ ಹೊತ್ತಿ ಉರಿದ ಮನೆ- ಸಜೀವ ದಹನವಾದ ಕುಟುಂಬಸ್ಥರು

sollebatti
Published on

ನವದೆಹಲಿ: ಮಧ್ಯರಾತ್ರಿ ಇದ್ದಕ್ಕಿದ್ದಂತೆಯೇ ಬೆಂಕಿ ಹೊತ್ತಿ ಉರಿದು ನಾಲ್ವರು ದಾರುಣವಾಗಿ ಮೃತಪಟ್ಟಿರುವ ಘಟನೆ ದೆಹಲಿಯ ಸೀಮಾಪುರಿ ಪ್ರದೇಶದಲ್ಲಿ ನಡೆದಿದೆ.

ಸೊಳ್ಳೆಬತ್ತಿ ಹಚ್ಚಿದ್ದರಿಂದ ಅದರ ಕಿಡಿ ಹಾರಿ ಬೆಂಕಿ ಹೊತ್ತಿರಬಹುದು ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಬೆಂಕಿ ಉರಿಯುತ್ತಿರುವುದನ್ನು ಕಂಡ ಸ್ಥಳೀಯರು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದರಿಂದ ಬೆಂಕಿಯನ್ನು ನಂದಿಸಲಾಗಿದೆ. ಆದರೆ ನಾಲ್ಕು ಮಂದಿ ಅದಾಗಲೇ ದಹಿಸಿ ಪ್ರಾಣಬಿಟ್ಟಿದ್ದರು.

ಮೂರು ಅಂತಸ್ತಿನ ಕಟ್ಟಡ ಇದಾಗಿದೆ. ಮೂರನೇ ಮಹಡಿಯಲ್ಲಿ ವಾಸಿಸುತ್ತಿದ್ದ ಕುಟುಂಬದಲ್ಲಿ ಈ ಅವಘಡ ಸಂಭವಿಸಿದೆ. ಸುಟ್ಟು ಕರಕಲಾಗಿದ್ದ ನಾಲ್ಕು ಮೃತದೇಹಗಳನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಮೃತರನ್ನು ಹರಿಲಾಲ್ (58), ಅವರ ಪತ್ನಿ ರೀನಾ (55), ಪುತ್ರ ಆಶು (24) ಹಾಗೂ ಪುತ್ರಿ ರೋಹಿಣಿ (18) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಮಗ ಅಕ್ಷಯ್ (22) ಎರಡನೆಯ ಅಂತಸ್ತಿನಲ್ಲಿ ಮಲಗಿದ್ದರಿಂದ ಅವನು ಸುರಕ್ಷಿತವಾಗಿದ್ದು, ತನ್ನೆಲ್ಲಾ ಕುಟುಂಬಸ್ಥರನ್ನು ಕಳೆದುಕೊಂಡಿದ್ದಾನೆ.

ಶಾಸ್ತ್ರಿ ಭವನದಲ್ಲಿ ಉದ್ಯೋಗಿಯಾಗಿದ್ದ ಹರಿಲಾಲ್ ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ನಿವೃತ್ತರಾಗಲಿದ್ದರು. ಅವರ ಪತ್ನಿ ದೆಹಲಿಯ ನಗರಪಾಲಿಕೆಯಲ್ಲಿ ಸ್ವೀಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತಪಟ್ಟ ಮಗ ಕೆಲಸದ ಹುಡುಕಾಟದಲ್ಲಿದ್ದರೆ, ಮೃತಪಟ್ಟ ಮಗಳು 12ನೇ ತರಗತಿ ಓದುತ್ತಿದ್ದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net