

ವಾಷಿಂಗ್ಟನ್: ವಿಶ್ವಾದ್ಯಂತ ಭಾರಿ ಕುತೂಹಲ ಕೆರಳಿಸಿದ್ದ ಅಮೆರಿಕ ಚುನಾವಣೆ ಫಲಿತಾಂಶ ಅಂತೂ ನಿನ್ನೆ ಅಂತಿಮ ಘಟ್ಟ ತಲುಪಿತು. ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಅವರನ್ನು ಸದ್ಯ ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗುವುದರೊಂದಿಗೆ ಸದ್ಯ ಅವರೇ ಅಧ್ಯಕ್ಷರಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಅಮೆರಿಕದ ಪ್ರಥಮ ವ್ಯಕ್ತಿಯಾಗಿ ಜೋ ಬೈಡೆನ್ ಆಯ್ಕೆಯಾಗಿದ್ದು, ಅವರ ಪತ್ನಿ ಪ್ರೊ.ಜಿಲ್ ಇದೀಗ ಸಹಜವಾಗಿ ಪ್ರಥಮ ಮಹಿಳೆಯಾಗಿದ್ದಾರೆ.
1977ರಲ್ಲಿ ಜೋ ಬೈಡನ್ ಅವರ ಜತೆ ವಿವಾಹ ಆಗಿರುವ ಮೂಲಕ ಆಗಿನಿಂದಲೂ ರಾಜಕೀಯ ವಲಯದಲ್ಲಿಯೇ ಗುರುತಿಸಿಕೊಂಡಿರುವ 69 ವರ್ಷದ ಜಿಲ್ ಅವರು, ವೃತ್ತಿಯಲ್ಲಿ ಪ್ರೊಫೆಸರ್. ಜೋ ಬೈಡನ್ ಅವರನ್ನು ವಿವಾಹವಾದ ಮೇಲೆ ಎರಡು ಅವಧಿಗೆ ಎರಡನೇ ಮಹಿಳೆಯಾಗಿದ್ದವರು. ಎರಡು ಅವಧಿಗೆ ಜೋ ಅವರು ಅಮೆರಿಕದ ಉಪಾಧ್ಯಕ್ಷರಾಗುವ ಮೂಲಕ ಅಮೆರಿಕದ ದ್ವಿತೀಯ ವ್ಯಕ್ತಿ ಎನಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಆ ಎರಡು ಅವಧಿಯವರೆಗೆ ಇವರು ಎರಡನೇ ಮಹಿಳೆಯಾಗಿ ಸಾಕಷ್ಟು ಕಾರ್ಯಗಳನ್ನು ನಿರ್ವಹಿಸಿದ್ದಾರೆ. ಇದೀಗ ಅಧ್ಯಕ್ಷರ ಪತ್ನಿಯಾಗಿ ಮೊದಲ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.
ಅಂದ ಹಾಗೆ ಜೋ ಬೈಡನ್ ಹಾಗೂ ಜಿಲ್ ಇಬ್ಬರದ್ದೂ ಇದು ಎರಡನೆಯ ವಿವಾಹ. 1972ರಲ್ಲಿ ಜೋ ಬೈಡನ್ ಅವರ ಪತ್ನಿ ಹಾಗೂ ಮಗಳು ಕಾರು ಅಪಘಾತದಲ್ಲಿ ಮೃತಪಟ್ಟರು. ಆಗ ಬದುಕಿದ್ದುದು ಇವರ ಇಬ್ಬರು ಚಿಕ್ಕ ಚಿಕ್ಕ ಗಂಡುಮಕ್ಕಳು. ಆಗ ಜೋ ಬೈಡನ್ ಅವರು ಅಮೆರಿಕದ ಸೆನೆಟ್ ಸದಸ್ಯರಾಗಿದ್ದರು. ಇಬ್ಬರು ಮಕ್ಕಳನ್ನು ಸಾಕುವುದು ಜೋ ಅವರ ಹೆಗಲ ಮೇಲಿತ್ತು. ದೆಲವೇರ್ನಿಂದ ವಾಷಿಂಗ್ಟನ್ಗೆ ದಿನನಿತ್ಯ ಪ್ರಯಾಣಿಸುತ್ತಿದ್ದರು.
ಇದೇ ಸಂದರ್ಭದಲ್ಲಿ ಇನ್ನೊಂದೆಡೆ ಜಿಲ್ ದಾಂಪತ್ಯದಲ್ಲಿ ಬಿರುಕು ಶುರುವಾಗಿತ್ತು. ಅವರು ತಮ್ಮ ಪತಿಯಿಂದ ವಿಚ್ಛೇದನ ಪಡೆಯುವ ಹಂತದಲ್ಲಿ ಇದ್ದರು. ಇದೇ ಸಂದರ್ಭದಲ್ಲಿ ಜೋ ಬೈಡನ್ ಹಾಗೂ ಜಿಲ್ ಅವರ ಪರಿಚಯವಾಗಿ, ಸ್ನೇಹಕ್ಕೆ ತಿರುಗಿತು. 1977ರಲ್ಲಿ ಇವರು ದಾಂಪತ್ಯಕ್ಕೆ ಕಾಲಿಟ್ಟರು.
ಹಂಟರ್ ಮತ್ತು ಬಿಯಾವ್ ಎಂಬ ಮಕ್ಕಳ ತಾಯಿಯಾಗಿದ್ದ ಜಿಲ್, 1981ರಲ್ಲಿ ಜೋ ಬಿಡನ್ ಅವರಿಂದ ಆಶ್ಲೆ ಎಂಬ ಹೆಣ್ಣುಮಗುವಿನ ತಾಯಿಯಾದರು. ಕುಟುಂಬದ ಜವಾಬ್ದಾರಿಯ ನಡುವೆಯೇ ಜಿಲ್ ಬೈಡನ್ ಎರಡು ಸ್ನಾತಕೋತ್ತರ ಪದವಿ ಪಡೆದದ್ದೂ ಅಲ್ಲದೇ, ಶಿಕ್ಷಣ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸದ್ಯ ಉತ್ತರ ವರ್ಜೀನಿಯಾ ಸಮುದಾಯ ಕಾಲೇಜಿನಲ್ಲಿ ಬೋಧಿಸುತ್ತಿದ್ದಾರೆ.
ಅಂದಹಾಗೆ ಜಿಲ್ ಅವರು ಹುಟ್ಟಿದ್ದು, 1951ರಲ್ಲಿ. ಫಿಲಿಡೆಲ್ಫಿಯಾದಲ್ಲಿ. 2011ರಲ್ಲಿ ಅವರು ಮಿಚೆಲ್ ಒಬಾಮಾ ಜತೆಗೆ ಮಿಲಿಟರಿ ಕುಟುಂಬಗಳ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡವರು. ಈಗಲೂ ಆ ಕ್ಷೇತ್ರ ಹಾಗೂ ಶಿಕ್ಷಣ ಸಮಸ್ಯೆಗಳ ವಿಚಾರದಲ್ಲಿ ಕಾರ್ಯ ನಿರ್ವಹಿಸುವುದಾಗಿ ಜಿಲ್ ಹೇಳಿದ್ದಾರೆ.