ಭಾರತ-ಅಮೆರಿಕ ಸಂಬಂಧ 21ನೇ ಶತಮಾನದ ವ್ಯಾಖ್ಯಾನ : ಜೋ ಬಿಡೆನ್

Narendra Modi,Joe Biden
Indian Prime Minister Narendra Modi shakes hands with Vice President Joe Biden during his address to a joint meeting of Congress on Capitol Hill in Washington, Wednesday, June 8, 2016. (AP Photo/Manuel Balce Ceneta)
Published on

ವಾಷಿಂಗ್ಟನ್​: ಭಾರತ-ಅಮರಿಕ ಸಂಬಂಧವು 21ನೇ ಶತಮಾನವನ್ನು ವ್ಯಾಖ್ಯಾನಿಸುವಂಥದ್ದು. ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಬಲಪಡಿಸುವತ್ತ ಗಮನಹರಿಸುವುದು ನಮ್ಮ ಆದ್ಯತೆ. ಈಗ 150 ಶತಕೋಟಿ ಡಾಲರ್​ಗಳ ವಹಿವಾಟಷ್ಟೇ ಉಭಯ ರಾಷ್ಟ್ರಗಳ ನಡುವೆ ಇರುವಂಥದ್ದು. ಇದನ್ನು 500 ಶತಕೋಟಿ ಡಾಲರ್​ಗೆ ಏರಿಸುವ ಉದ್ದೇಶ ನಮ್ಮದು ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡೆನ್ ಅಭಿಪ್ರಾಯ ಪಟ್ಟಿದ್ದಾರೆ.ಮತಎಣಿಕೆ ಶುರುವಾಗಿ ಅವರು ಗೆಲುವಿನ ಓಟದಲ್ಲಿರುವಾಗಲೇ ವ್ಯಕ್ತಪಡಿಸಿರುವ ಅಭಿಪ್ರಾಯವಿದು.ಈ ಹಿಂದೆ ಉಪಾದ್ಯಕ್ಷರಾಗಿದ್ದಗಲೂ ಎರಡು ದೇಶಗಳ ನಡುವಿನ ಸಂಬಂಧ ಗಟ್ಟಿಗೊಳಿಸುವಲ್ಲಿ ಅವರು ಮಹತ್ವದ ಪಾತ್ರವಹಿಸಿದ್ದರು.

ಆಪ್ತರಾಷ್ಟ್ರಗಳಾಗಿರಬೇಕಾದ್ದು ಅವಶ್ಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಒಪೆಡ್ ಲೇಖನ ಬರೆದಿದ್ದ ಜೋ ಬಿಡೆನ್ ಅದರಲ್ಲಿ, ಹದಿನೈದು ವರ್ಷಗಳ ಹಿಂದೆ ರಿಪಬ್ಲಿಕನ್ ಡಿಕ್ ಲುಗಾರ್ ಅವರ ಜತೆಗೆ ನಾನು ಸೆನೆಟ್​ನ ಫಾರಿನ್ ರಿಲೇಷನ್ಸ್ ಕಮಿಟಿಯ ಮುಖ್ಯಸ್ಥನಾಗಿದ್ದಾಗ ಉಭಯ ದೇಶಗಳ ನಡುವಿನ ಐತಿಹಾಸಿಕ ನಾಗರಿಕ ಅಣ್ವಸ್ತ್ರ ಡೀಲ್​ ಅಂತಿಮವಾಗಿತ್ತು. ನಮ್ಮ ಸುಧಾರಿತ ಟೆಕ್ನಾಲಜಿ, ರಕ್ಷಣಾ ಸಹಕಾರಕ್ಕೂ ಒಪ್ಪಂದವಾಗಿತ್ತು. ಆ ಸಂದರ್ಭದಲ್ಲಿ ನಾನು ಹೇಳಿದ್ದೆ - ಒಂದೊಮ್ಮೆ ಅಮೆರಿಕ ಮತ್ತು ಭಾರತ ಆಪ್ತ ರಾಷ್ಟ್ರಗಳಾಗಿ ಬಿಟ್ಟರೆ ಜಗತ್ತು ಅತ್ಯಂತ ಸುರಕ್ಷಿತವಾಗಿ ಇರಲಿದೆ ಎಂಬುದನ್ನು ನೆನಪಿಸಿಕೊಂಡಿದ್ಧಾರೆ.

ಅಧ್ಯಕ್ಷೀಯ ಚರ್ಚೆಯ ಕೊನೆಯ ಭಾಗದಲ್ಲಿ ಡೊನಾಲ್ಡ್ ಟ್ರಂಪ್ ಅವರು ವಾಯು ಮಾಲಿನ್ಯವನ್ನು ಉಲ್ಲೇಖಿಸುತ್ತ ಭಾರತವನ್ನು "ಹೊಲಸು" ಎಂದು ವ್ಯಾಖ್ಯಾನಿಸಿದ್ದರು. ಇದನ್ನು ಜೋ ಬಿಡೆನ್ ತೀವ್ರವಾಗಿ ಖಂಡಿಸಿದ್ದರಲ್ಲದೆ, ಅಧ್ಯಕ್ಷ ಟ್ರಂಪ್ ಭಾರತವನ್ನು ಹೊಲಸು ಎಂದು ಸಂಬೋಧಿಸಿದ್ದಾರೆ. ನಿಮ್ಮ ಸ್ನೇಹಿತರು, ಗೆಳೆಯರ ಬಗ್ಗೆ ಮಾತನಾಡುವ ರೀತಿಯಾ ಇದು ಮತ್ತು ಹವಾಮಾನ ವೈಪರೀತ್ಯದಂತಹ ಜಾಗತಿಕ ಸವಾಲುಗಳನ್ನು ಪರಿಹರಿಸುವ ರೀತಿಯಾ ಇದು ಎಂದು ಪ್ರಶ್ನಿಸಿದ್ದರು.

ಇಷ್ಟಾದ ಮೇಲೂ ಎರಡು ದಿನಗಳ ನಂತರ ಟ್ರಂಪ್ ಪುನಃ ಚೀನಾ,ರಷ್ಯಾ ಮತ್ತು ಭಾರತವನ್ನು ಹೊಲಸು ಎಂದು ವಾಯು ಮಾಲಿನ್ಯ ಉಲ್ಲೇಖಿಸಿ ಟೀಕಿಸಿದ್ದರು.ಕಮಲಾ ಹ್ಯಾರಿಸ್ ಮತ್ತು ನಾನು ನಮ್ಮ ಪಾಲುದಾರ ರಾಷ್ಟ್ರಗಳು, ಮಿತ್ರ ರಾಷ್ಟ್ರಗಳನ್ನು ಗೌರವಿಸುತ್ತೇವೆ.ಇದು ನಮ್ಮ ವಿದೇಶ ನೀತಿಯ ತಿರುಳು ಕೂಡ ಹೌದು. ನಾವು ಅಮೆರಿಕ-ಭಾರತದ ಸಂಬಂಧಕ್ಕೆ ಬೆಲೆಕೊಡುತ್ತೇವೆ ಮತ್ತು ಅದನ್ನು ಮುಂದುವರಿಸುತ್ತೇವೆ.ಡೊನಾಲ್ಡ್ ಟ್ರಂಪ್ ಅವರಿಗೆ ಅದು ಪೋಸ್ ಕೊಡುವ ವಿಚಾರವಾಗಿರಬಹುದು.ನನ್ನ ಮಟ್ಟಿಗೆ ಈ ಸಂಬಂಧಗಳು ಪರಸ್ಪರ ಕೆಲಸಗಳನ್ನು ಪೂರೈಸಿಕೊಳ್ಳುವಂಥದ್ದಾಗಿದೆ ಎಂದು ಬಿಡೆನ್ ಹೇಳಿದ್ದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net