ದುಬೈ ಹಿಂದೂಗಳಿಗೆ ದಸರಾ ಗಿಫ್ಟ್​: ಉದ್ಘಾಟನೆಗೊಂಡಿತು ಹಲವು ವಿಶೇಷತೆಗಳ ಪ್ರಪ್ರಥಮ ಸ್ವತಂತ್ರ ದೇಗುಲ

temple
Published on

ದುಬೈ(ಯುಎಇ): ಅರಬ್‌ ನಾಡು ದುಬೈನಲ್ಲಿರುವ ಹಿಂದೂಗಳ ಬಹು ವರ್ಷಗಳ ಕನಸು ಸಾಕಾರಗೊಂಡಿದೆ. ಇಲ್ಲಿ ಪ್ರಪ್ರಥಮ ಬಾರಿಗೆ ಮೊದಲ ಸ್ವತಂತ್ರ ಹಿಂದೂ ದೇವಾಲಯ ನಿರ್ಮಾಣಗೊಂಡಿದೆ. ದುಬೈನ ಜೆಬೆಲ್ ಅಲಿಯಲ್ಲಿರುವ ಆರಾಧನಾ ಗ್ರಾಮದಲ್ಲಿ ಮಂದಿರ ನಿರ್ಮಾಣವಾಗಿದ್ದು, ಈಗ ಅದು ಉದ್ಘಾಟನೆಗೊಂಡಿದೆ. ಕಳೆದೊಂದು ದಶಕದಿಂದ ಇಲ್ಲಿಯ ಹಿಂದೂಗಳು ಇಂಥದ್ದೊಂದು ದೇಗುಲಕ್ಕೆ ಮನವಿ ಸಲ್ಲಿಸಿದ್ದು, ಇದೀಗ ಅವರ ಕನಸು ನನಸಾಗಿದೆ.

ಈ ದೇವಾಲಯವು ಜೆಬೆಲ್ ಅಲಿಯಲ್ಲಿ 'ಆರಾಧನಾ ಗ್ರಾಮ' ಎಂದು ಹೆಸರಿಸಿರುವ ಪ್ರದೇಶದಲ್ಲಿ ಇದೆ. ಈ ಪ್ರದೇಶದಲ್ಲಿ ಹಲವು ಚರ್ಚ್‌ಗಳು ಮತ್ತು ಗುರು ನಾನಕ್ ದರ್ಬಾರ್ ಗುರುದ್ವಾರ ಸೇರಿದಂತೆ ವಿವಿಧ ಧರ್ಮಗಳ ಪ್ರಾರ್ಥನಾ ಮಂದಿರಗಳಿವೆ ಎಂಬುದು ವಿಶೇಷ.

ವರದಿಗಳ ಪ್ರಕಾರ, 2020ರಲ್ಲಿ ದೇವಾಲಯದ ಅಡಿಪಾಯ ಶುರು ಮಾಡಲಾಗಿತ್ತು. ಸೆಪ್ಟೆಂಬರ್ 1 ರಂದು ಎಲ್ಲಾ ಧರ್ಮಗಳ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಉದ್ಘಾಟನೆಗೊಂಡಿದ್ದು, ಇಂದಿನಿಂದ ಸಾರ್ವಜನಿಕರಿಗೆ ದೇಗುಲ ಪ್ರವೇಶವನ್ನು ಮುಕ್ತಗೊಳಿಸಲಾಗಿದೆ.

ಯುಎಇಯ ಸಹಿಷ್ಣುತೆ ಮತ್ತು ಸಹಬಾಳ್ವೆ ಸಚಿವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರು ಹೊಸ ಹಿಂದೂ ದೇವಾಲಯವನ್ನು ಉದ್ಘಾಟಿಸಿದರು ಎಂದು ಯುಎಇ ನಿವಾಸಿ ಹಸನ್ ಸಜ್ವಾನಿ ಟ್ವೀಟ್ ಮಾಡಿದ್ದಾರೆ. ಖಲೀಜ್ ಟೈಮ್ಸ್ ಪ್ರಕಾರ, ಹೊಸ ದೇವಾಲಯವು ಯುಎಇಯ ಅತ್ಯಂತ ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದಾದ ಸಿಂಧಿ ಗುರು ದರ್ಬಾರ್ ದೇವಾಲಯದ ವಿಸ್ತರಣೆಯಾಗಿದೆ.

ದೇಗುಲದ ವಿಶೇಷಗಳು ಹಲವು:

ಈ ದೇಗುಲದಲ್ಲಿ 16 ದೇವತೆಗಳನ್ನು ಸ್ಥಾಪಿಸಲಾಗಿದೆ. ಅಲಂಕೃತ ಕಂಬಗಳು, ಅರೇಬಿಕ್ ಮತ್ತು ಹಿಂದೂ ಜ್ಯಾಮಿತೀಯ ವಿನ್ಯಾಸಗಳು ಮತ್ತು ಚಾವಣಿಯ ಮೇಲೆ ಸುಂದರ ಗಂಟೆಗಳು ಈ ದೇವಾಲಯದ ಸೊಬಗನ್ನು ಹೆಚ್ಚಿಸಿವೆ. ಮಧ್ಯ ಭಾಗದಲ್ಲಿರುವ ಗುಮ್ಮಟದಲ್ಲಿರುವ ಗುಲಾಬಿ ಕಮಲದ ಮುಖ್ಯ ಸಭಾಂಗಣದಲ್ಲಿ ದೇವತೆಗಳನ್ನು ಇರಿಸಲಾಗಿದೆ. ಮುಖ್ಯ ಸಭಾಂಗಣದಲ್ಲಿ ಕೇಂದ್ರ ಗುಮ್ಮಟದಲ್ಲಿ 3ಡಿ-ಮುದ್ರಿತ ಗುಲಾಬಿ ಕಮಲವನ್ನು ಸ್ಥಾಪಿಸಲಾಗಿದೆ. ದೇವಾಲಯದಲ್ಲಿ ಶ್ರೀ ಗುರು ಗ್ರಂಥ ಸಾಹಿಬ್ ಸಹ ಸ್ಥಾಪಿಸಲಾಗಿದೆ.

ಎಲ್ಲಾ ಧರ್ಮದ ಜನರನ್ನು ಸ್ವಾಗತಿಸುವ ದೇವಾಲಯವು 16 ದೇವತೆಗಳು, ಗುರು ಗ್ರಂಥ ಸಾಹಿಬ್, ಸಿಖ್ಖರ ಪವಿತ್ರ ಪುಸ್ತಕ ಮತ್ತು ಇತರ ಧಾರ್ಮಿಕ ಗ್ರಂಥಗಳನ್ನು ಒಳಗೊಂಡಿದೆ.

ಅಂದಹಾಗೆ ಈ ದೇವಸ್ಥಾನದಲ್ಲಿ ಭಕ್ತರ ಅನುಕೂಲಕ್ಕಾಗಿ ದೇವಾಲಯದ ಆಡಳಿತವು ತನ್ನ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕ್ಯೂಆರ್​ ಕೋಡ್​ ಆಧರಿತ ಅಪಾಯಿಂಟ್‌ಮೆಂಟ್ ವ್ಯವಸ್ಥೆಯನ್ನು ಮಾಡಿದೆ. ದೇವಾಲಯವು ಬೆಳಗ್ಗೆ 6:30 ರಿಂದ ರಾತ್ರಿ 8ರ ವರೆಗೆ ತೆರೆದಿರುತ್ತದೆ. ಅಪಾಯಿಂಟ್‌ಮೆಂಟ್‌ ತೆಗೆದುಕೊಂಡಿರುವ ಭಕ್ತರಿಗೆ ಮಾತ್ರವೇ ದೇವರ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗುತ್ತದೆ. ಇದಲ್ಲದೇ, ದೇವಾಲಯದಲ್ಲಿ ಪ್ರತಿದಿನ 1200 ಭಕ್ತರಿಗೆ ಅವಕಾಶ ನೀಡಲಾಗುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net