

ನವದೆಹಲಿ: ಬಾಲಿವುಡ್ಗೂ ಡ್ರಗ್ಸ್ ನಂಟು ಅಂಟಿರುವ ವಿವಾದ ಇದೀಗ ಬೇರೆ ಬೇರೆ ಸ್ವರೂಪ ತಾಳುತ್ತಿದೆ. ಖ್ಯಾತ ನಿರ್ದೇಶಕ ಕರಣ್ ಜೋಹರ್ ಏರ್ಪಡಿಸಿದ್ದ ಪಾರ್ಟಿಯಲ್ಲಿ ಘಟಾನುಘಟಿ ನಟ-ನಟಿಯರು ಡ್ರಗ್ಸ್ ಸೇವನೆ ಮಾಡಿದ್ದರು ಎಂದು ಶಿರೋಮಣಿ ಅಖಾಲಿ ದಳದ ಮುಖಂಡ ಮಂಜಿಂದರ್ ಸಿಂಗ್ ಸಿರ್ಸಾ ದೂರು ದಾಖಲು ಮಾಡಿದ್ದಾರೆ.
ಈ ಕುರಿತು ವಿಡಿಯೋವನ್ನು ಕೂಡ ಅವರು ದೂರಿನ ಜತೆ ನೀಡಿದ್ದಾರೆ. ಮಾದಕ ವಸ್ತು ನಿಯಂತ್ರಣ ಬ್ಯೂರೋ ಮುಖ್ಯಸ್ಥರಾದ ರಾಕೇಶ್ ಆಸ್ತಾನ ಅವರನ್ನು ದೆಹಲಿಯಲ್ಲಿ ಭೇಟಿಯಾಗಿರುವ ಮಂಜಿಂದರ್ ಸಿಂಗ್ ಸಿರ್ಸಾ ದೂರು ನೀಡಿದ್ದಾರೆ.
ಈ ಹಿಂದೆ ಕರಣ್ ಜೋಹರ್ ಅವರು ಪಾರ್ಟಿ ಏರ್ಪಡಿಸಿದ್ದರು. ಅದರಲ್ಲಿ ಹಿಂದಿ ಚಿತ್ರರಂಗದ ಅನೇಕ ನಟ-ನಟಿಯರು ಭಾಗವಹಿಸಿದ್ದರು. ಅವರೆಲ್ಲರೂ ಡ್ರಗ್ಸ್ ಸೇವನೆ ಮಾಡಿದ್ದರು ಎಂದು ಮಂಜಿಂದರ್ ಸಿಂಗ್ ಆರೋಪಿಸಿದ್ದಾರೆ. 2019ರಲ್ಲಿ ಈ ಪಾರ್ಟಿ ನಡೆದಿತ್ತು ಎನ್ನಲಾಗಿದೆ.
ವರುಣ್ ಧವನ್, ಅರ್ಜುನ್ ಕಪೂರ್, ದೀಪಿಕಾ ಪಡುಕೋಣೆ, ಮಲೈಕಾ ಅರೋರಾ, ಶಾಹಿದ್ ಕಪೂರ್, ವಿಕ್ಕಿ ಕೌಶಾಲ್, ಮುಂತಾದವರು ಭಾಗವಹಿಸಿದ್ದರು. ಆ ಪಾರ್ಟಿಯ ವಿಡಿಯೋಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದರಲ್ಲಿದ್ದ ಕಲಾವಿದರ ವರ್ತನೆಯನ್ನು ಗಮನಿಸಿರುವ ಸಿಂಗ್ ಅವರು ಇದರ ತನಿಖೆ ಆಗಬೇಕು ಎಂದು ಹೇಳಿದ್ದಾರೆ.
'ಈ ವಿಡಿಯೋದಲ್ಲಿ ಕಾಣುತ್ತಿರುವ ಎಲ್ಲ ಮುಖಗಳನ್ನು ನೆನಪಿಟ್ಟುಕೊಳ್ಳಿ. ಡ್ರಗ್ಸ್ ಪಾರ್ಟಿಮಾಡಿದ್ದಾಗಿ ಜೈಲಿಗೆ ಹೋಗುವ ತಯಾರಿ ಮಾಡಿಕೊಳ್ಳಲಿ' ಎಂದು ಅವರು ಟ್ವೀಟ್ ಮಾಡಿದ್ದಾರೆ.