

ರಾಯಚೂರು: ಸತತ ಮಳೆಯಿಂದಾಗಿ ತೊಗರಿ ಬೆಳೆ ಗದ್ದೆಯಲ್ಲಿ ನೀರು ನಿಂತು ಸಂಪೂರ್ಣ ನಾಶವಾಗಿರುವುದಕ್ಕೆ ಬೇಸತ್ತ ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ತುರಡಗಿ ಗ್ರಾಮದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಿದ್ದಪ್ಪ (50) ಎನ್ನುವವರು ಆತ್ಮಹತ್ಯೆಯ ಹಾದಿ ತುಳಿದಿದ್ದಾರೆ. ಇವರು ಸಾಲ ಮಾಡಿ 3.5 ಎಕರೆ ಪ್ರದೇಶದಲ್ಲಿ ತೊಗರಿ ಬೆಳೆದಿದ್ದರು. ಸತತ ಮಳೆಯಿಂದಾಗಿ ತೊಗರಿ ಬೆಳೆ ನೀರುನಿಂತು ಹಾಳಾಗಿ ಹೋಗಿತ್ತು. ಬೆಳೆನಾಶವಾಗಿದ್ದಕ್ಕೆ ಮನನೊಂದು ಸಾವಿನ ಹಾದಿ ಹಿಡಿದಿದ್ದಾರೆ.
ಮೃತ ರೈತನಿಗೆ ಮೂವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ ಇದ್ದಾರೆ. ನಿನ್ನೆಯೂ ಲಿಂಗಸಗೂರು ತಾಲೂಕಿನ ಬೋಗಾಪುರದ ರೈತ ವೀರನಗೌಡ ಮಾಲಿ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರೋ ಬೆನ್ನಲ್ಲೇ ಇದೀಗ ಇವರೂ ಆತ್ಮಹತ್ಯೆ ಮಾಡಿಕೊಂಡಿರುವುದು ಎಲ್ಲರಲ್ಲಿ ಆತಂಕ ಮೂಡಿಸುತ್ತಿದೆ.
ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಭಾಗದಲ್ಲಿ ಜೋಳ, ತೊಗರಿ, ಈರುಳ್ಳಿ, ಸವತಿಕಾರಿ, ಬದನೆ ಸೇರಿ ವಿವಿಧ ಹಿಂಗಾರು ಬೆಳೆಗಳು ನೀರಲ್ಲಿ ಕೊಳೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇದರಿಂದ ಅನ್ನದಾತರು ಕಂಗಾಲಾಗಿದ್ದಾರೆ. ತೆಗ್ಗಿ, ಕೆಲವಡಿ, ತಿಮ್ಮಸಾಗರ ಮತ್ತಿತರ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಮಳೆ ನಿಂತರೂ ಇನ್ನೂ ಜಲಾವೃತದಿಂದ ಬೆಳೆಗಳು ಹಾಳಾಗುತ್ತಿವೆ. ಆದರೆ ಇದುವರೆಗೆ ಈ ಭಾಗಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ತಿರುಗಿಯೂ ನೋಡಲಿಲ್ಲ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ. ಸರ್ಕಾರದಿಂದ ಪರಿಹಾರಕ್ಕೆ ರೈತರು ಆಗ್ರಹಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)