

ಬಲ್ರಾಮ್ಪುರ (ಬಿಹಾರ): ರಾಜಕಾರಣಿಗಳಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಸರಳ, ಸದಾ-ಸೀದಾ ಜೀವನವನ್ನು ನಡೆಸುವುದು ಬಿಟ್ಟರೆ ಬಹುತೇಕ ಮಂದಿ ಆಗರ್ಭ ಶ್ರೀಮಂತರೇ. ನಿಜವಾಗಿಯೂ ಜನರಿಗಾಗಿ ದುಡಿಯುವ, ನಾಲ್ಕಾರು ತಲೆಮಾರಿಗಾಗುವಷ್ಟು ಹಣವನ್ನು ಕೂಡಿಹಾಕಲು ಏನು ಬೇಕಾದರೂ ಮಾಡಲು ಹೇಸದ ರಾಜಕಾರಣಿಗಳು ಬಲು ಅಪರೂಪ.
ಇದೇ ಕಾರಣಕ್ಕೆ ಸರಳ, ನಿಷ್ಠಾವಂತ ರಾಜಕಾರಣಿಗಳ ಬಗ್ಗೆ ಆಗಾಗ್ಗೆ ಸುದ್ದಿಯಾಗುವುದು ಇದೆ. ಅಂಥದ್ದೇ ಒಬ್ಬ ರಾಜಕಾರಣಿ ಬಹಳ ವರ್ಷಗಳಿಂದಲೂ ಸುದ್ದಿಯಲ್ಲಿದ್ದರು. ಐದು ಬಾರಿ ಶಾಸಕರಾಗಿದ್ದರೂ ಚಿಕ್ಕ ಮನೆಯಲ್ಲಿಯೇ ಇದ್ದ ಈ ರಾಜಕಾರಣಿಯ "ಸತ್ಯ, ನಿಷ್ಠೆ, ಪ್ರಾಮಾಣಿಕತೆ"ಗೆ ಜನರು ಮನಸೋತಿದ್ದರು. ಭಾರಿ ಶ್ಲಾಘನೆಯೂ ವ್ಯಕ್ತವಾಗಿತ್ತು.
ಆದರೆ ಈ ರಾಜಕಾರಣಿಯ ಇತಿಹಾಸ ಕೆದಕಿದಾಗ ಹೊಗಳಿದವರೆಲ್ಲರಿಗೂ ತಲೆ ಸುತ್ತು ಬರುವ ಹಾಗಿದೆ. ಅಷ್ಟಕ್ಕೂ ಈ ರಾಜಕಾರಣಿ ಯಾರು ಎಂದರೆ ಬಿಹಾರದ ಬಲ್ರಾಮ್ಪುರದ ಸಿಪಿಐ(ಎಂ)(ಎಲ್) ಪಕ್ಷದ ಮೆಹಬೂಬ್ ಅಲಮ್.
ಇದಾಗಲೇ ನಾಲ್ಕು ಬಾರಿ ಶಾಸಕನಾಗಿ ಇದೀಗ ಐದನೇ ಬಾರಿ ಶಾಸಕನಾದ ಸಂದರ್ಭದಲ್ಲಿ ಅವರಿದ್ದ ಚಿಕ್ಕ ಮನೆಯಲ್ಲಿ ಮಗ ಶುಭಾಶಯ ಕೋರಿದ್ದ. ಅದು ಭಾರಿ ವೈರಲ್ ಆಗಿ ಈ ಶಾಸಕನನ್ನು ಕೊಂಡಾಡಿದ್ದೇ ಕೊಂಡಾಡಿದ್ದು. ರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿಯೂ ಇವರ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದ್ದಂತೆಯೇ ಜೈಜೈಕಾರವೇ ಹರಿದುಬಂದಿತ್ತು.
ಆದರೆ ಇವರ ಬಗ್ಗೆ ಫ್ಯಾಕ್ಟ್ ಚೆಕ್ನಲ್ಲಿ ಬಹಿರಂಗವಾಗಿರುವ ಮಾಹಿತಿ ಎಂದರೆ; ಈ ಚುನಾವಣೆಯಲ್ಲಿ ಅವರು ಘೋಷಿಸಿದ ಆಸ್ತಿಯ ಮೌಲ್ಯ 31.8 ಲಕ್ಷ ರೂಪಾಯಿ. ಕಳೆದ ಬಾರಿ ಅಂದರೆ 2015ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿದ್ದ ಅವರು ಘೋಷಿಸಿಕೊಂಡಿರುವ ಆಸ್ತಿಗಿಂತ ಈ ಬಾರಿ ಅವರ ಆಸ್ತಿ 8.84 ಲಕ್ಷ ಏರಿಕೆಯಾಗಿದೆ! ಅಲ್ಲಿಗೆ ಅವರು ಲಕ್ಷಾಧೀಶರು ಎಂದು ಸಾಬೀತಾಗಿದೆ.
ನೆನಪಿರಲಿ. ಇದು ಕೇವಲ ಘೋಷಿಸಿಕೊಂಡಿರುವ ಆಸ್ತಿಯಷ್ಟೇ! ಕೆಲವು ರಾಜಕಾರಣಿಗಳು ಘೋಷಿಸಿಕೊಂಡಿರುವ ಆಸ್ತಿಗಳನ್ನು ನೋಡಿದಾಗ ಇದು ಅಷ್ಟು ಬೃಹತ್ ಮೊತ್ತವೇನೂ ಅನ್ನಿಸದೇ ಇರಲಾರದು ಎನ್ನಿ.
ಆದರೆ ಇಷ್ಟಕ್ಕೇ ಮುಗಿಯುವುದಿಲ್ಲ. ಮೆಹಬೂಬ್ ಅಲಮ್ ಅವರ ಇತಿಹಾಸ ಇನ್ನೂ ಭಯಾನಕವಾಗಿದೆ. ಬಿಹಾರದ ಶಾಸಕರ ಪೈಕಿ ಮುಕ್ಕಾಲು ಪಾಲು ಶಾಸಕರಿಗೆ ಅಪರಾಧ ಹಿನ್ನೆಲೆ ಇರುವುದು ಹೊಸ ವಿಷಯವೇನಲ್ಲ. ಅದೇ ರೀತಿ ಅಲನ್ ಅವರದ್ದು ಕೂಡ.
2014ರ ಲೋಕಸಭೆ ಚುನಾವಣೆಗೆ ಕಾತಿಹಾರ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಅವರ ವಿರುದ್ಧ ಕೊಲೆ ಕೇಸ್ ಇದ್ದುದರಿಂದ ನಾಮಪತ್ರ ಸಲ್ಲಿಸಿದ ನಂತರ ಬಂಧಿಸಲಾಗಿತ್ತು.
2015ರಲ್ಲಿ ಚುನಾವಣೆಗೆ ಇವರು ಸ್ಪರ್ಧಿಸಿದ್ದಾಗ ಮೂರು ಕೊಲೆ ಆರೋಪವೂ ಸೇರಿ 13 ಅಪರಾಧಗಳನ್ನು ಅಫಿಡವಿಟ್ನಲ್ಲಿ ಘೋಷಿಸಿದ್ದರು. ಈ ಬಾರಿ ಒಟ್ಟು 28 ಪ್ರಕರಣಗಳಲ್ಲಿ ಇವರು ಆರೋಪಿ! ಕೊಲೆ, ದಂಗೆಗೆ ಪ್ರಚೋದನೆ, ಅಧಿಕಾರಿಗಳಿಗೆ ದೈಹಿಕ ಹಲ್ಲೆ ಪ್ರಕರಣಗಳು ಎಲ್ಲವೂ ಇದರಲ್ಲಿವೆ.
ಆದರೆ ಅವರ ಪಕ್ಷ ಮಾತ್ರ ಇವೆಲ್ಲ ಆರೋಪಗಳು ನಿರಾಧಾರ, ಇದೊಂದು ವ್ಯವಸ್ಥಿತ ಸಂಚು ಎಂದಿದೆ.