

ಕೋಲ್ಕತಾ: ನಿರುದ್ಯೋಗ ಸಮಸ್ಯೆ ಎನ್ನುವುದು ಇಂದು ನಿನ್ನೆಯ ವಿಷಯವಲ್ಲ. ಆದರೆ ಕರೊನಾದಿಂದಾಗಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇವರ ಪೈಕಿ ಹೆಚ್ಚಿನವರು ಐಟಿ-ಬಿಟಿ ಕಂಪೆನಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರು. ಇದೇ ಕಾರಣಕ್ಕೆ ಇಂಜಿನಿಯರಿಂಗ್ ಪದವಿ ಮುಗಿಸಿದವರಿಗೆ ಈಗ ಎಲ್ಲಿಯೂ ಉದ್ಯೋಗ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕೋಲ್ಕತಾದ ಶವಾಗಾರದಲ್ಲಿ ಶವ ಕಾಯುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಆರು ಹುದ್ದೆಗಳಷ್ಟೇ ಖಾಲಿ ಇದ್ದು, ಅವರಿಗೆ 15 ಸಾವಿರ ರೂಪಾಯಿ ಸಂಬಳ ನಿಗದಿ ಮಾಡಲಾಗಿದೆ. ಈ ಆರು ಪೋಸ್ಟ್ಗೆ ಹೈಸ್ಕೂಲ್ ಆದವರಿಂದ ಅರ್ಜಿ ಕರೆಯಲಾಗಿದೆ. ಆದರೆ ಅಚ್ಚರಿಯ ವಿಷಯ ಎಂದರೆ, ಈ ಹುದ್ದೆಗೆ ಒಂದು ಸಾವಿರ ಮಂದಿ ಇಂಜಿನಿಯರಿಂಗ್ ಪದವೀಧರರು, 500 ಮಂದಿ ಸ್ನಾತಕೋತ್ತರ ಪದವೀಧರರು ಹಾಗೂ ಎರಡು ಸಾವಿ ಮಂದಿ ಪದವೀಧರರೂ ಅರ್ಜಿ ಸಲ್ಲಿಸಿದ್ದಾರೆ!
ಕೋಲ್ಕತಾದ ಸೀಲ್ರತನ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಕರೆದ ಹುದ್ದೆ ಇದಾಗಿದೆ. ಈ ಹುದ್ದೆಗೆ ಎಂಟನೇ ಕ್ಲಾಸ್ ಮುಗಿಸಿದವರಿಗೆ ಕರೆಯಲಾಗಿತ್ತು. ಕೇವಲ ಆರು ಹುದ್ದೆ ಇದ್ದು ಎಂಟು ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿವೆ. ಸದ್ಯ 784 ಮಂದಿಯನ್ನು ಲಿಖಿತ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.