ಚಿಕ್ಕಂದಿನಿಂದಲೂ ಇವಳೇ ನಿನ್‌ ಹೆಂಡ್ತಿ ಎಂದರು- ಆದರೆ ಆದದ್ದೇ ಬೇರೆ: ಇಂಜಿನಿಯರಿಂಗ್‌ ವಿದ್ಯಾರ್ಥಿನಿಯ ಬರ್ಬರ ಹತ್ಯೆ!

murder
Published on

ಹೈದರಾಬಾದ್: ಚಿಕ್ಕಂದಿನಿಂದಲೂ ಇವಳೇ ನಿನ್ನ ಹೆಂಡತಿ, ಇವಳನ್ನೇ ನಿನಗೆ ಕೊಟ್ಟು ಮದುವೆ ಮಾಡುವುದು ಎಂದು ಕುಟುಂಬಸ್ಥರು ಮಾತನಾಡಿಕೊಳ್ಳುತ್ತಿದ್ದರು, ಆ ಬಾಲಕನನ್ನು ಛೇಡಿಸುತ್ತಿದ್ದರು. ಇದನ್ನೇ ನಂಬಿದ್ದ ಬಾಲಕ ಆಕೆಯೇ ತನ್ನ ಹೆಂಡತಿ ಎಂದುಕೊಳ್ಳುತ್ತಲೇ ಬೆಳೆದ. ಆದರೆ ಬಾಲಕಿ ದೊಡ್ಡವಳಾಗಿ ಇಂಜಿನಿಯರಿಂಗ್‌ ಕಾಲೇಜು ಸೇರಿದಾಗ ಬೇರೊಬ್ಬನನ್ನು ಪ್ರೀತಿಸತೊಡಗಿದಳು.

ತನ್ನ ಹೆಂಡತಿಯಾಗಬೇಕಿದ್ದವಳು ಬೇರೊಬ್ಬನ ಜತೆಯಲ್ಲಿ ಇರುವುದನ್ನು ಸಹಿಸಲಾಗದ ಯುವಕ, ಆಕೆಯನ್ನು ಬರ್ಬರವಾಗಿ ಹತ್ಯೆಗೈದು ಸಂಪ್‌ನೊಳಕ್ಕೆ ಮೃತದೇಹ ಎಸೆದಿರುವ ಭಯಾನಕ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

19 ವರ್ಷದ ಮಂಜುಳಾ ಮೃತಪಟ್ಟ ಯುವತಿ. ಈಕೆಯನ್ನು ಕೊಲೆ ಮಾಡಿರುವ ಆರೋಪವನ್ನು ಮೂಸಾಸಪೇಟೆ ನಿವಾಸಿಯಾಗಿರುವ ಭೂಪತಿ ಎದುರಿಸುತ್ತಿದ್ದಾನೆ. ಇಬ್ಬರೂ ಸಂಬಂಧಿಕರಾಗಿದ್ದು, ಮಂಜುಳಾ ನಿನ್ನ ಪತ್ನಿ ಎಂದು ಭೂಪತಿಗೆ ಚಿಕ್ಕಂದಿಸಿನಿಂದಲೂ ಹೇಳಲಾಗಿತ್ತು. ಆದರೆ ಆಕೆ ಬೇರೆಯವರನ್ನು ಪ್ರೀತಿಸುತ್ತಿದ್ದಳು. ಇದನ್ನು ಕಂಡು ಸಿಟ್ಟಿನಿಂದ ಭೂಪತಿ ನಿನ್ನ ಜತೆ ಮಾತನಾಡಬೇಕಿದೆ ಎಂದು ಯುವತಿಯನ್ನು ಕುಕಟಪಲ್ಲಿಯ ಮನೆಗೆ ಕರೆಸಿಕೊಂಡಿದ್ದ ಹೋಗಿದ್ದ.

ಇಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿ ಸಂಪ್‌ನಲ್ಲಿ ಮೃತದೇಹ ಎಸೆದು ಪರಾರಿಯಾಗಿದ್ದ. ಇತ್ತ ಮಗಳಿಗಾಗಿ ಪಾಲಕರು ಹುಡುಕಾಟ ನಡೆಸಿದ್ದರು. ಆಕೆ ಸಿಗದಾಗ ಪೊಲೀಸರಿಗೆ ದೂರು ನೀಡಿದ್ದರು. ಪರಾರಿಯಾಗಿದ್ದ ಭೂಪತಿಗೆ ಈ ದೂರಿನ ವಿಷಯ ತಿಳಿಯಿತು. ಅತ್ತ ಪೊಲೀಸರು ಭಾರಿ ತನಿಖೆ ಕೈಗೊಂಡಾಗ ಹೆದರಿ ಕೊನೆಗೆ ತಾನೇ ಬಂದು ಶರಣಾಗಿದ್ದಾನೆ.

ನನ್ನನ್ನು ಕಡೆಗಣಿಸಿ ಬೇರೆ ಯುವಕನೊಂದಿಗೆ ಸಂಬಂಧ ಬೆಳೆಸಿದ್ದಳು. ಆತನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಇದನ್ನು ನೋಡಿ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net