ಸಿಕ್ಕಷ್ಟು ಸಿಗಲಿ... ಪಲ್ಟಿಯಾದ ವಾಹನದಲ್ಲಿದ್ದ ಚೆಲ್ಲಾಪಿಲ್ಲಿ ಮೊಟ್ಟೆಗಳನ್ನು ಬಾಚಲು ದೌಡು!

egg
Published on

ಉಧಮ್​ಸಿಂಗ್ (ಉತ್ತರಾಖಂಡ): ಯಾವುದಾದರೂ ಸಾಮಗ್ರಿಗಳನ್ನು ತುಂಬಿರುವ ವಾಹನಗಳು ಪಲ್ಟಿಯಾದಾಗ ಸ್ಥಳೀಯರು ಸಹಾಯಕ್ಕೆ ಬರುವ ಬದಲು ವಾಹನದಿಂದ ಬಿದ್ದಿರುವ ವಸ್ತುಗಳನ್ನು ಕೊಂಡೊಯ್ಯಲು ಕಾದಾಟ ಮಾಡುವ ದೃಶ್ಯ ಸಾಮಾನ್ಯವಾಗಿದೆ.

ಅಂಥದ್ದೇ ಒಂದು ದೃಶ್ಯ ಉತ್ತರ ಪ್ರದೇಶದ ಉಧಮ್​ಸಿಂಗ್ ನಗರದ ಹೆದ್ದಾರಿಯಲ್ಲಿ ನಡೆದಿದೆ.

ಮೊಟ್ಟೆ ತುಂಬಿದ್ದ ಪಿಕಪ್ ವಾಹನ ಪಲ್ಟಿಯಾಗಿದೆ.‌ ವಾಹನದಲ್ಲಿದ್ದ 50 ಸಾವಿರಕ್ಕೂ ಹೆಚ್ಚು ಮೊಟ್ಟೆಗಳು ನೆಲಕ್ಕುರುಳಿದೆ. ವೇಗವಾಗಿ ಬರ್ತಿದ್ದ ಕ್ಯಾಂಟರ್ ಗೆ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಪಲ್ಟಿಯಾಗಿದೆ.

ಈ ಸುದ್ದಿ ಕ್ಷಣ ಮಾತ್ರದಲ್ಲಿ ಹರಿದಾಡಿದೆ. ಕೆಲ ನಿಮಿಷಗಳಲ್ಲಿಯೇ ಜನರು ಅಲ್ಲಿಗೆ ದೌಡಾಯಿಸಿದ್ದಾರೆ. ಆದರೆ ಬಂದದ್ದು ವಾಹನ ಸವಾರರಿಗೆ ಸಹಾಯ ಮಾಡಲು ಅಲ್ಲ, ಬದಲಿಗೆ ಮೊಟ್ಟೆ ಬಾಚಿಕೊಳ್ಳಲು! ಗಾಯಾಳುಗಳನ್ನು ರಕ್ಷಿಸುವ ಬದಲು ಜನರು ಮೊಟ್ಟೆ ಆರಿಸುವಲ್ಲಿ ನಿರತರಾದರು.

ರಸ್ತೆಯಲ್ಲಿ ಬಿದ್ದ ಒಡೆಯದ ಮೊಟ್ಟೆಗಳನ್ನೂ ಬಿಡದ ಜನರು ಸಿಕ್ಕಷ್ಟು ಸಿಗಲಿ ಎಂದು ಬಾಚಿಕೊಳ್ಳಲು ಮುಗಿಬಿದ್ದಿದ್ದರು. ಸ್ಥಳಕ್ಕೆ ಬಂದ ಪೊಲೀಸರಿಗೆ ಜನರನ್ನು ಚದುರಿಸುವುದು ದೊಡ್ಡ ಸವಾಲಾಗಿತ್ತು.

ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. 5 ಲಕ್ಷ ಮೌಲ್ಯದ ಮೊಟ್ಟೆಯನ್ನು ಬೇಕರಿಯೊಂದಕ್ಕೆ ಡಿಲೆವರಿ ಮಾಡಬೇಕಾಗಿತ್ತು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net