

ಕರೊನಾ ಸೃಷ್ಟಿಸಿದ ಜೀವಹಾನಿ, ವಿತ್ತೀಯ ಹಾನಿ ಊಹೆಗೆ ನಿಲುಕದ್ದು. ಅದರಲ್ಲೂ, ಎರಡನೇ ಅಲೆ ಕರ್ನಾಟಕದಲ್ಲಿ ತೀವ್ರವಾಗಿ ಹರಡಿ, ಆಘಾತ ನೀಡಿತು. ಎಷ್ಟೋ ಜನರು ಆತ್ಮೀಯರನ್ನು, ಬಂಧು-ಬಳಗದವರನ್ನು ಕಳೆದುಕೊಂಡರೆ, ಅಸಂಖ್ಯ ಮನೆಗಳು ಕುಟುಂಬದ ಆಧಾರವನ್ನೇ ಕಳೆದುಕೊಂಡವು. ವಿಚಿತ್ರ ಮತ್ತು ಸಂದಿಗ್ಧದ ಸಂದರ್ಭಗಳು ಸೃಷ್ಟಿಯಾದವು. ಗ್ರಾಮೀಣ ಭಾಗದಲ್ಲೂ ಸೋಂಕು ಪ್ರಮಾಣ ಏರಿಕೆ ಆಗಿ, ಹಳ್ಳಿಗರು ನಲುಗಿದ ನಿದರ್ಶನ ಕಣ್ಮುಂದೆಯೇ ಇದೆ. ಬಹುಪಾಲು ಕೃಷಿವ್ಯವಸ್ಥೆಯನ್ನೇ ನಂಬಿಕೊಂಡಿರುವ ಗ್ರಾಮೀಣ ಕರ್ನಾಟಕ, ಇಂಥ ಅನಿರೀಕ್ಷಿತ ಸವಾಲಿನಿಂದ ಮತ್ತಷ್ಟು ಸಮಸ್ಯೆ ಅನುಭವಿಸಿತು. ಕರೊನಾ ನಿಯಂತ್ರಣಕ್ಕಾಗಿ ವಿಧಿಸಲಾಗಿದ್ದ ಲಾಕ್ಡೌನ್ ಪರಿಣಾಮ ಸಂಕಷ್ಟಕ್ಕೆ ತುತ್ತಾದ ಶ್ರಮಿಕರು ಸೇರಿ ಹಲವು ರಂಗ, ವಲಯದವರಿಗೆ ರಾಜ್ಯ ಸರ್ಕಾರ ನೆರವಿನ ಪ್ಯಾಕೇಜ್ನ್ನು ಘೋಷಿಸಿತು. ಕೇಂದ್ರ ಉಚಿತ ಪಡಿತರ ನೀಡುತ್ತಿದೆ. ಅಲ್ಲದೆ, ಕೋವಿಡ್ಗೆ ಬಲಿಯಾದ ಬಿಪಿಎಲ್ ಕುಟುಂಬದ ವ್ಯಕ್ತಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗ ರೈತರ ನೆರವಿಗೆ ಮುಂದಾಗಿರುವುದು ಗಮನಾರ್ಹ.
ಕರೊನಾ ಸೋಂಕಿಗೆ ಬಲಿಯಾದ 10187 ರೈತರ ಕೃಷಿ ಸಾಲ ಮನ್ನಾ ಮಾಡುವ ಮೂಲಕ ಅವಲಂಬಿತ ಕುಟುಂಬದ ಮೇಲಿನ ಹೊರೆ ಇಳಿಸುವ ಕುರಿತು ಚಿಂತನೆ ಆರಂಭಿಸಿದೆ ರಾಜ್ಯ ಸರ್ಕಾರ. ಡಿಸಿಸಿ ಬ್ಯಾಂಕ್ ಹಾಗೂ ಪಿಕಾರ್ಡ್, ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ ಸಾಲ ಪಡೆದು ಕರೊನಾದಿಂದ ಮೃತಪಟ್ಟಿರುವ 10187 ರೈತರ 79.47 ಕೋಟಿ ರೂಪಾಯಿ ಸಾಲ ಮನ್ನಾ ಮಾಡಲು ಉದ್ದೇಶಿಸಲಾಗಿದ್ದು, ಮೂರು-ನಾಲ್ಕು ದಿನಗಳಲ್ಲಿ ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.
ಇಂಥ ಸಂಕಷ್ಟದ ಸಂದರ್ಭದಲ್ಲಿ ಈ ಬಗೆಯ ನೆರವಿನ ಕ್ರಮ ಮಾನವೀಯ ಸಂವೇದನೆಯ ಪ್ರತೀಕ ಮಾತ್ರವಲ್ಲದೆ, ಮುಂದಿನ ಪರಿಸ್ಥಿತಿ ಎದುರಿಸಲು ಒಂದಿಷ್ಟು ಭರವಸೆಯ ದಾರಿ ಕೂಡ ಆಗಬಲ್ಲದು. ತಮ್ಮವರನ್ನು ಕಳೆದುಕೊಂಡವರ ನೋವು ಒಂದೆಡೆಯಾದರೆ, ಮುಂದಿನ ಬದುಕು ಹೇಗೆ ಎಂಬ ಸಂದಿಗ್ಧತೆ ಮತ್ತೊಂದೆಡೆ. ಅದರಲ್ಲೂ, ರೈತ ಕುಟುಂಬಗಳ ಮೇಲೆ ಸಾಲದ ಹೊರೆ ಇದ್ದರೆ ಪರಿಸ್ಥಿತಿ ಇನ್ನೂ ಶೋಚನೀಯ. ಈ ಸ್ಥಿತಿಯನ್ನು ಅವಲೋಕಿಸಿಯೇ ಸರ್ಕಾರ ಸಾಲ ಮನ್ನಾ ಕುರಿತು ಚಿಂತನೆ ನಡೆಸಿದೆ. ಹೀಗೆ ಮಾಡಿದರೆ ರೈತ ಕುಟುಂಬವನ್ನು ರಕ್ಷಿಸುವ ಜವಾಬ್ದಾರಿ ತೆಗೆದುಕೊಂಡಂತಾಗುತ್ತದೆ, ಕೃಷಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂಬ ಆಶಯ ಇದರ ಹಿಂದಿದೆ.
ಇದು ಉತ್ತಮ ನಿರ್ಧಾರವೇ. ಆದರೆ, ನಮ್ಮಲ್ಲಿ ಒಳ್ಳೆಯ ಘೋಷಣೆಗಳು, ಯೋಜನೆಗಳು ಕೂಡ ಅನುಷ್ಠಾನದ ಹಂತದಲ್ಲಿ ದಾರಿ ತಪ್ಪಿ, ನೈಜ ಫಲಾನುಭವಿಗಳು ಪರಿತಪಿಸುವಂತಾಗುತ್ತದೆ. ರೈತ ಕುಟುಂಬಗಳ ವಿಷಯದಲ್ಲಿ ಹಾಗಾಗಬಾರದು. ಈ ನಿಟ್ಟಿನಲ್ಲಿ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಿ, ಯೋಜನೆಯನ್ನು
ಸಮರ್ಪಕವಾಗಿ, ಪಾರದರ್ಶಕವಾಗಿ ಜಾರಿಗೆ ತರಬೇಕು. ಕರೊನಾದಿಂದ ಮೃತಪಟ್ಟವರಲ್ಲಿ ರೈತರ ಸಂಖ್ಯೆಯೇ ಅಧಿಕ ಎಂಬುದು ಅಂಕಿಅಂಶಗಳಿಂದ ದೃಢಪಟ್ಟಿದ್ದು, ಅವರ ಕುಟುಂಬಗಳಿಗೆ ಖಂಡಿತವಾಗಿಯೂ ನೆರವಿನ ಅಗತ್ಯವಿದೆ.