

ನವದೆಹಲಿ: ಕಾಂಗ್ರೆಸ್ ಮುಖವಾಣಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿನ ಅಕ್ರಮ ಹಣ ವರ್ಗಾವಣೆಯಲ್ಲಿ ಸಿಲುಕಿರುವ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್ ಗಾಂಧಿಯವರಿಗೆ ಇದಾಗಲೇ ಜಾರಿ ನಿರ್ದೇಶನಾಲಯ ವಿಚಾರಣೆಗೆ ನೋಟಿಸ್ ಜಾರಿ ಮಾಡಿತ್ತು. ರಾಹುಲ್ ಗಾಂಧಿಯವರನ್ನು ಆರು ದಿನಗಳವರೆಗೆ ವಿಚಾರಣೆ ನಡೆಸಲಾಗಿದ್ದರೆ, ಕರೊನಾ ಕಾರಣದಿಂದ ಸೋನಿಯಾ ಗಾಂಧಿ ವಿಚಾರಣೆಗೆ ಹಾಜರು ಆಗಿರಲಿಲ್ಲ.
ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದ್ದ ಮಾರನೆಯ ದಿನವೇ ಸೋನಿಯಾ ಅವರಿಗೆ ಕರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ನಿರ್ದೇಶನಾಲಯವು ಅವರ ಹಾಜರಿಗೆ ಮತ್ತೊಮ್ಮೆ ಸೂಚಿಸಿದ ಮರುದಿನ ಕರೊನಾ ಸೋಂಕು ಹೆಚ್ಚಿ ಸೋನಿಯಾ ಆಸ್ಪತ್ರೆ ಸೇರಿದ್ದರು.
ಕಳೆದ ಸೋಮವಾರ ಸೋನಿಯಾ ಗಾಂಧಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಇದೇ ಗುರುವಾರ (ಜೂನ್ 23) ಅವರ ಖುದ್ದು ಹಾಜರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ.
ಆದರೆ ವೈದ್ಯರು ಸಂಪೂರ್ಣವಾಗಿ ಬೆಡ್ರೆಸ್ಟ್ ಹೇಳಿದ್ದರಿಂದ ವಿಚಾರಣೆಗೆ ಹಾಜರು ಆಗಲು ಸಾಧ್ಯವಾಗುತ್ತಿಲ್ಲ, ತಮಗೆ ಇನ್ನಷ್ಟು ಕಾಲಾವಕಾಶ ಬೇಕು ಎಂದು ಅವರು ಜಾರಿ ನಿರ್ದೇಶನಾಲಯಕ್ಕೆ ಸೋನಿಯಾ ನಿನ್ನೆ (ಬುಧವಾರ) ಮನವಿ ಮಾಡಿಕೊಂಡಿದ್ದರು.
ಈ ಮನವಿಯನ್ನು ಜಾರಿ ನಿರ್ದೇಶನಾಲಯ ಮಾನ್ಯ ಮಾಡಿದೆ. ಅವರಿಗೆ ಹೊಸದಾಗಿ ಸಮನ್ಸ್ ಜಾರಿ ಮಾಡಿದೆ. ಜುಲೈ ಮಧ್ಯದವರೆಗೆ ಸೋನಿಯಾ ಅವರಿಗೆ ಸಮಯ ನೀಡಲಾಗಿದೆ. ಜುಲೈ ಮಧ್ಯದ ವಾರದಲ್ಲಿ ವಿಚಾರಣೆಗೆ ಹಾಜರು ಇರಬೇಕು ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರಿಗೆ ಇ.ಡಿ. ಯಿಂದ ತಾತ್ಕಾಲಿಕ ಮುಕ್ತಿ ಸಿಕ್ಕಂತಾಗಿದೆ.