ಬಂಧನದ ಭೀತಿ: 5 ವರ್ಷಗಳಲ್ಲಿ ಪಲಾಯನ ಮಾಡಿದ 'ಶ್ರೀಮಂತ ಕಳ್ಳ'ರೆಷ್ಟು ಗೊತ್ತಾ?

offenders
Published on

ನವದೆಹಲಿ: ಇಷ್ಟು ವರ್ಷಗಳ ಕಾಲ ಯಾವುದೇ ಭಯವಿಲ್ಲದೇ ನಿರ್ಭೀತಿಯಿಂದ ಭಾರತದಲ್ಲಿಯೇ ತಮ್ಮ ಕಳ್ಳ ವ್ಯವಹಾರವನ್ನು ನಡೆಸಿಕೊಂಡು ಹೋಗುತ್ತಿದ್ದ 38 ಆರ್ಥಿಕ ಅಪರಾಧಿಗಳು ಕಳೆದ ಐದು ವರ್ಷಗಳಲ್ಲಿ ದೇಶಬಿಟ್ಟು ಹೋಗಿದ್ದಾರೆ!

ಈ ಕುರಿತು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. 2015ರ ಡಿಸೆಂಬರ್ 31ರಿಂದ 2019ರ ಮಧ್ಯೆ ಐದು ವರ್ಷಗಳಲ್ಲಿ 38 ಮಂದಿ ಆರ್ಥಿಕ ಅಪರಾಧಿಗಳು ದೇಶ ಬಿಟ್ಟು ಪರಾರಿ ಆಗಿದ್ದಾರೆ. ಇವರು ಬ್ಯಾಂಕ್​ಗಳಿಂದ ಸಾಲ ಪಡೆದು, ಅದನ್ನು ಮರುಪಾವತಿಸದೆ ಪರಾರಿ ಆಗಿರುವವರು ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ.

ವಂಚನೆ ಮಾಡಿ, ಬ್ಯಾಂಕ್​ಗಳ ಮೂಲಕ ಸಾಲ ಪಡೆದುಕೊಂಡು, ದೇಶ ಬಿಟ್ಟು ಪರಾರಿಯಾದವರೂ ಸೇರಿದಂತೆ ಬೇರೆ ದೇಶಗಳಿಗೆ ವಲಸೆ ಹೋದವರ ಮಾಹಿತಿ ಕೇಂದ್ರ ಸರ್ಕಾರದ ಬಳಿ ಇದೆಯೇ ಎಂದು ಕೇಳಿದ್ದ ಪ್ರಶ್ನೆಗೆ ಉತ್ತರವಾಗಿ ಅವರು ಈ ಮಾಹಿತಿ ನೀಡಿದ್ದಾರೆ.

ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಸೇರಿದಂತೆ 38 ಮಂದಿ ಉದ್ದೇಶಿತ ಸುಸ್ತಿದಾರರು ಭಾರತದಿಂದ ಪರಾರಿಯಾಗಿದ್ದಾರೆ ಎಂದರು. ಇವರ ವಿರುದ್ಧ ಕೇಂದ್ರೀಯ ತನಿಖಾ ದಳವು ಮೊಕದ್ದಮೆ ದಾಖಲು ಮಾಡಿತ್ತು. ಈ ಅವಧಿಗಿಂತ ಮುಂಚಿತವಾಗಿ ಸಾಲ ಪಡೆದುಕೊಂಡಿದ್ದ ಅವರು ವಾಪಸ್​ ನೀಡಿರಲಿಲ್ಲ. ಮೊಕದ್ದಮೆ ದಾಖಲಾಗುತ್ತಿದ್ದಂತೆಯೇ ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂದು ಅವರು ತಿಳಿಸಿದರು.

ಇವರಲ್ಲಿ ಇದಾಗಲೇ 20 ಅಪರಾಧಿಗಳಿಗೆ ರೆಡ್​ಕಾರ್ನರ್​ ನೋಟಿಸ್​ ನೀಡುವಂತೆ ಅರ್ಜಿ ಹಾಕಲಾಗಿದೆ. 14 ಮಂದಿಯ ಹಸ್ತಾಂತರಕ್ಕೆ ಮನವಿ ಸಲ್ಲಿಸಲಾಗಿದೆ. ಹನ್ನೊಂದು ಮಂದಿ ವಿರುದ್ಧ ದೇಶಭ್ರಷ್ಟ ಆರ್ಥಿಕ ಅಪರಾಧಿ ಕಾಯ್ದೆ 2018ರ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಅವರು ಲಿಖಿತವಾಗಿ ಉತ್ತರಿಸಿದರು.

ರಾಷ್ಟ್ರೀಕೃತ ಬ್ಯಾಂಕ್​ಗಳ ಮಾಹಿತಿ ಪ್ರಕಾರ, 2014ರಿಂದ 2019ರ ಮಧ್ಯೆ ಉದ್ದೇಶಿತ ಸುಸ್ತಿದಾರರಿಂದ 7654 ಕೋಟಿ ರುಪಾಯಿ ವಸೂಲಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net