ಜೈಲಾ..? ಬೇಲಾ..? ಸಂಕಷ್ಟದಲ್ಲಿ ನಶೆ ಪ್ರಿಯರು- ಇಂದು ಆರು ಆರೋಪಿಗಳ ಭವಿಷ್ಯ ನಿರ್ಧಾರ

sanjana,ragini
Published on

ಬೆಂಗಳೂರು: ಡ್ರಗ್ಸ್ ಜಾಲದ ನಂಟು ಆರೋಪ ಹೊತ್ತಿರುವ ನಟಿ ರಾಗಿಣಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಕೋರ್ಟ್​ ಮುಂದೆ ಬರುವ ಸಾಧ್ಯತೆ ಇದೆ.

ಸಂಜನಾ ಹೊರತುಪಡಿಸಿ ಉಳಿದ ಆರೋಪಿಗಳಾದ ರಾಹುಲ್, ವಿರೇನ್ ಖನ್ನಾ, ರವಿಶಂಕರ್ ಹಾಗೂ ಲೂಯಿ ಪೆಪ್ಪರ್ ಎಲ್ಲರೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇವರಿಗೆ ಜೈಲಾ, ಬೇಲಾ ಎನ್ನುವುದು ಇಂದು ಸಂಜೆಯ ಒಳಗೆ ತೀರ್ಮಾನ ಆಗಲಿದೆ.

ಈ ನಡುವೆಯೇ ಇಬ್ಬರೂ ನಶೆ ನಟಿಯರು ಸೇರಿದಂತೆ ಉಳಿದ ಆರೋಪಿಗಳ ಕಸ್ಟಡಿ ಇಂದು ಅಂತ್ಯವಾಗಲಿದ್ದು, ಇವರನ್ನು ಮಧ್ಯಾಹ್ನದ ವೇಳೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆಗಳಿವೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಸಿಎಚ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ. ಇವರ ಪೈಕಿ ಯಾರ ಕಸ್ಟಡಿ ಮುಂದುವರೆಯುತ್ತದೆಯೋ, ಯಾವ ಆರೋಪಿಗಳ ಕಸ್ಟಡಿ ಮುಗಿಯುತ್ತದೆಯೋ ಎಂಬ ಕುತೂಹಲವಿದೆ.

ಒಂದು ವೇಳೆ ಅರ್ಜಿಯ ವಿಚಾರಣೆ ಕೋರ್ಟ್​ ಮುಂದೆ ಬರದೇ ಹೋದರೆ, ವಿಚಾರಣೆ ಮುಂದೂಡಿಕೆಯಾದರೆ ಅಥವಾ ಜಾಮೀನು ಅರ್ಜಿ ತಿರಸ್ಕೃತವಾದರೆ ಆರೋಪಿಗಳು ಕೆಲವು ದಿನಗಳು ಜೈಲಿನಲ್ಲಿಯೇ ಇರಬೇಕಾದುದು ಅನಿವಾರ್ಯ.

ರಾಗಿಣಿ ವಿರುದ್ಧ ಸಾಕಷ್ಟು ಪುರಾವೆಗಳು ಸಿಕ್ಕಿರುವ ಹಿನ್ನೆಲೆಯಲ್ಲಿ, ನಟಿ ಸಂಜನಾಳಿಗಿಂತ ಮತ್ತಷ್ಟು ಆತಂಕದಲ್ಲಿ ನಟಿ ರಾಗಿಣಿ ಇರುವುದಾಗಿ ತಿಳಿದುಬಂದಿದೆ. ಈಗಾಗಲೇ 12 ದಿನಗಳ ಕಾಲ ಪೊಲೀಸ್ ವಿಚಾರಣೆ ಎದುರಿಸಿರುವ ರಾಗಿಣಿ ಇಂದು ಜಾಮೀನು ಅರ್ಜಿ ವಿಚಾರಣೆ ಇರುವ ಭಯದಲ್ಲಿಯೇ ನಿನ್ನೆ ರಾತ್ರಿ ಕಳೆದಿದ್ದಾರೆ. ನಿನ್ನೆ ತಡವಾಗಿ ಊಟ ಸೇವಿಸಿದ್ದರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net