

ಲಖನೌ: ಕರೊನಾ ಇರಲಿ, ಸಾವೇ ಎದುರಿಗೆ ಬರಲಿ... ಧನಪಿಶಾಚಿ ಒಮ್ಮೆ ದೇಹಕ್ಕೆ ಹೊಕ್ಕಿಬಿಟ್ಟರೆ ಅದನ್ನು ಅಷ್ಟು ಸುಲಭದಲ್ಲಿ ಹೊರಕ್ಕೆ ಹಾಕಲು ಸಾಧ್ಯವಿಲ್ಲ. ಅಂಥದ್ದೇ ಒಬ್ಬ ಧನದಾಹಿಯಿಂದ ಮಹಿಳೆಯೊಬ್ಬಳು ಇದೀಗ ಮದುವೆಯಾದ ವಾರದಲ್ಲಿಯೇ ತವರುಮನೆ ಸೇರುವಂತಾಗಿದೆ!
ವರದಕ್ಷಿಣೆಗಾಗಿ ಗಂಡ, ಆತನ ಮನೆಯವರು ಪೀಡಿಸುವುದು, ಹೆಣ್ಣನ್ನು ಸಾಯಿಸುತ್ತಿರುವ ಹಲವಾರು ಘಟನೆಗಳು ನಡೆಯುತ್ತಲೇ ಇದ್ದರೂ, ಕೆಲವೊಂದು ಮಾತ್ರ ಬೆಳಕಿಗೆ ಬರುತ್ತಿದೆ.
ಅಂಥದ್ದೇ ಒಂದು ಘಟನೆ ಉತ್ತರ ಪ್ರದೇಶದ ಹಸನಪುರದಲ್ಲಿ ನಡೆದಿದೆ. ಸದ್ದಾಂ ಎಂಬಾತ ಶಬನಂ ಎಂಬುವವರನ್ನು ಮದುವೆಯಾಗಿದ್ದ. ಮದುವೆಯಾದ ಮೂರನೇ ದಿನಕ್ಕೆ ಅಮ್ಮನ ಮನೆಗೆ ಹೆಂಡತಿಯನ್ನು ದಬ್ಬಿರುವ ಸದ್ದಾಂ, ವರದಕ್ಷಿಣೆ ತರುವಂತೆ ಪೀಡಿಸಿದ್ದಾನೆ.
ಶಬನಂ ಮನೆಯವರಿಗೆ ಈತ ಕೇಳಿದಷ್ಟು ಹಣ ಕೊಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಎಂಟನೇ ದಿನಕ್ಕೇ ತಲಾಖ್... ತಲಾಖ್... ತಲಾಖ್.... ಎನ್ನುವ ಮೂಲಕ ವಿಚ್ಛೇದನ ಕೊಟ್ಟಿದ್ದಾನೆ!
ಆಗಸ್ಟ್ 10ರಂದು ಹಸನಪುರದ ನಿವಾಸಿ ಶಬನಂ ಮದುವೆ ಮುರಾದಾಬಾದ್ ಜಿಲ್ಲೆಯ ಮಾವೂ ಗ್ರಾಮದ ಸದ್ದಾಂ ಜತೆ ನಡೆದಿತ್ತು. ಮದುವೆಯ ವೇಳೆ ಬೈಕ್ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನ ಶಬನಂ ತವರಿನವರು ನೀಡಿದ್ದಾರೆ. ಆದರೆ ಈತನಿಗೆ ಅಷ್ಟು ಸಾಕಾಗಲಿಲ್ಲ. ಈತನಿಗೆ ಐದು ಲಕ್ಷ ಬೇಕಿತ್ತಂತೆ, ಜತೆಗೆ ಕಾರಿಗೂ ಡಿಮಾಂಡ್ ಮಾಡಿದ್ದ.
ಅದನ್ನು ತರುವಂತೆ 13ನೇ ತಾರೀಖಿನಂದು ತವರಿಗೆ ಕಳುಹಿಸಿದ್ದಾನೆ, ಆಗಸ್ಟ್ 18ರಂದು ಆಕೆಯ ತವರಿಗೆ ಹೋಗಿ ತಲಾಖ್ ಹೇಳಿ ಬಂದಿದ್ದಾನೆ.
ಮಹಿಳೆಯ ತಂದೆ ದೂರಿನನ್ವಯ ಸದ್ದಾಂ ಸೇರಿದಂತೆ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.