

ಹೈದರಾಬಾದ್: ತೆಲಂಗಾಣ ರಾಜ್ಯದ ಸಚಿವಾಲಯದ ಆವರಣದಲ್ಲಿ 2 ಮಸೀದಿ, 1 ದೇವಸ್ಥಾನ, 1 ಚರ್ಚ್ ನಿರ್ಮಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.
ಎಲ್ಲ ಪೂಜಾ ಸ್ಥಳಗಳಿಗೆ ಒಂದೇ ದಿನ ಅಡಿಪಾಯ ಹಾಕಿ, ಒಂದೇ ದಿನ ನಿರ್ಮಾಣ ಕಾರ್ಯ ಪ್ರಾರಂಭಿಸಿ, ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ.
ಮುಸ್ಲಿಂ ಸಮುದಾಯದ ಮುಖಂಡರ ಜತೆ ನಡೆದ ಸುದೀರ್ಘ ಮಾತುಕತೆಯ ಬಳಿಕ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಸರ್ಕಾರ ಇಂಥದ್ದೊಂದು ತೀರ್ಮಾನ ತೆಗೆದುಕೊಂಡಿದೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಇವರ ಸಹೋದರ ಅಕ್ಬರುದ್ದೀನ್ ಓವೈಸಿ ಸೇರಿದಂತೆ ಅನೇಕ ಮಂದಿ ಭಾಗವಹಿಸಿದ್ದರು.
ಸಚಿವಾಲಯದ ಹಳೆಯ ಕಟ್ಟಡವನ್ನು ಕೆಡುವುವಾಗ ಒಂದು ದೇವಸ್ಥಾನ, ಎರಡು ಮಸೀದಿಗಳಿಗೆ ಹಾನಿಯಾಗಿತ್ತು, ಈ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ದೇವಾಲಯ ಹಾಗೂ ಮಸೀದಿ ಇರುವಾಗ ಅಲ್ಲಿ ಚರ್ಚ್ ಬೇಕೆಂದು ಕ್ರೈಸ್ತ ಸಮುದಾಯದವರು ಬೇಡಿಕೆ ಸಲ್ಲಿಸಿದ್ದರಿಂದ ಅದರ ನಿರ್ಮಾಣಕ್ಕೂ ಸರ್ಕಾರ ಮುಂದಾಗಿದೆ.
ಒಂದು ಇಮಾಮ್ ಕ್ವಾರ್ಟರ್ಸ್ ಸೇರಿ ತಲಾ 750 ಚ.ಅಡಿಯಂತೆ 2 ಮಸೀದಿಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಹೊಸ ಮಸೀದಿಗಳನ್ನು ನಿರ್ಮಿಸಿದ ಬಳಿಕ ರಾಜ್ಯ ವಕ್ಫ್ ಬೋರ್ಡ್‌ಗೆ ಹಸ್ತಾಂತರಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಮುಸ್ಲಿಂ ಸಮುದಾಯಕ್ಕೆ ಭರ್ಜರಿ ಗಿಫ್ಟ್ ನೀಡಲು ಸರ್ಕಾರ ಮುಂದಾಗಿದೆ. ಅನಾಥ ಮುಸ್ಲಿಂ ಮಕ್ಕಳಿಗಾಗಿ ಆಶ್ರಯ ಕೇಂದ್ರ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 18 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಿದ್ದಾರೆ. ಜತೆಗೆ, ಹೈದರಾಬಾದ್‍ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮುಸ್ಲಿಂ ಕೇಂದ್ರವನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಜಾಗವನ್ನೂ ಗುರುತಿಸಲಾಗಿದೆ.
ಮುಸ್ಲಿಂ ಸಮುದಾಯದವರಿಗಾಗಿ ಖಬರ್‌ಸ್ತಾನ್ ಸಹ ಗುರುತಿಸಲು ಸರ್ಕಾರ ಮುಂದಾಗಿದ್ದು, ನಗರದ ಹಲವು ಸ್ಥಳಗಳನ್ನು ಗುರುತು ಮಾಡಿದೆ. ಉರ್ದು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಮುಂದುವರೆಯಲು ಉರ್ದು ಭಾಷೆಯ ರಕ್ಷಣೆ, ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜನೆ ರೂಪಿಸಲಾಗಿದೆ.
ಸಚಿವಾಲಯದ ಆವರಣದಲ್ಲಿ ಈ ಹಿಂದೆ ಮಸೀದಿಗಳಿದ್ದ ಜಾಗದಲ್ಲೇ ಹೊಸ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಹೊಸ ಮಸೀದಿಗಳನ್ನು ನಿರ್ಮಿಸಿದ ಬಳಿಕ ರಾಜ್ಯ ವಕ್ಫ್ ಬೋರ್ಡ್‌ಗೆ ಹಸ್ತಾಂತರಿಸಲು ಸರ್ಕಾರ ನಿರ್ಧರಿಸಿದೆ. ದೇವಸ್ಥಾನವನ್ನು ಕಾಮಗಾರಿ ಪೂರ್ಣಗೊಂಡ ಬಳಿಕ ಧಾರ್ಮಿಕ ದತ್ತಿ ಇಲಾಖೆಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.