ನಾಯಿಗಾಗಿ ಕಟ್ಟಿಸಿದ ಐಷಾರಾಮಿ ಮನೆ: ಟಿವಿ, ಜಿಮ್‌... ಅಬ್ಬಬ್ಬಾ... ಇದರಲ್ಲಿದೆ ಭರ್ಜರಿ ಸೌಕರ್ಯ...

dog
Published on

ವಾಷಿಂಗ್ಟನ್: ನಾಯಿಗೂ, ಮನುಷ್ಯನಿಗೂ ಬಿಡಿಸಲಾರದ ನಂಟಿದೆ. ಸಾಕು ನಾಯಿಗಳು ಎಂದರೆ ಅದೆಷ್ಟೋ ಮಂದಿಗೆ ಇನ್ನಿಲ್ಲದ ಪ್ರೀತಿ. ಅದರಲ್ಲಿಯೂ ಮಕ್ಕಳಿಲ್ಲದ ದಂಪತಿಗೆ ಸಾಕು ನಾಯಿಗಳೇ ಮಕ್ಕಳು. ನಿಷ್ಠೆಗೆ ಹೆಸರುವಾಸಿಯಾಗಿರುವ ನಾಯಿಗಳಿಗೂ ತಮ್ಮ ಮಾಲೀಕನನ್ನು ಕಂಡರೆ ಅಷ್ಟೇ ಅಕ್ಕರೆ.

ಇಂಥ ಪ್ರೀತಿಯಿಂದಲೇ ಇಲ್ಲೊಬ್ಬ ವ್ಯಕ್ತಿ ತನ್ನ ನಾಯಿಗೆ ಸುಮಾರು 4 ಲಕ್ಷ ರೂಪಾಯಿಗಳ ಭವ್ಯ ಮನೆ ಕಟ್ಟಿಸಿಕೊಟ್ಟಿದ್ದಾನೆ. ಈ ಮನೆಯೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿತ್ತು, ಸಹಸ್ರಾರು ಮಂದಿ ನಾಯಿ ಪ್ರೀತಿಗಾಗಿ ಮೆಚ್ಚುಗೆ ಸೂಸಿದ್ದರೆ, ಇನ್ನು ಕೆಲವರು ಬಡವರಿಗೆ ಈ ಹಣವನ್ನು ಕೊಟ್ಟಿದ್ದರೆ ಅವರಿಗಾದರೂ ಒಂದು ಸೂರು ಆಗುತ್ತಿತ್ತು ಎಂದಿದ್ದಾರೆ.

ಹೀಗೆ ನಾಯಿ ಟೆಡ್ಡಿಯ ಮೂಲಕ ಜನಪ್ರಿಯತೆ ಪಡೆದಿರುವ ವ್ಯಕ್ತಿ ದಕ್ಷಿಣ ಕಾಲಿಫೋರ್ನಿಯಾದ ಜೋನಾಥನ್ ಲೊವರ್ ಎಂಬಾತ. ನಾಯಿಯ ಮನೆಯ ಹೆಸರು "ಟೆಡ್ಡಿ ಹೌಸ್. ವಿಚಿತ್ರ ಎಂದರೆ ಜೀನಾಥನ್‌ ತನ್ನ ನಾಯಿಗಾಗಿ ಮನೆಯಲ್ಲಿ ದುಬಾರಿ ಟೀವಿ ಕೂಡ ಹಾಕಿಸಿದ್ದಾನೆ. ಗೋಡೆಯ ಮೇಲೆ ನಾಯಿಯ ಬೃಹದಾಕಾರದ ಫೋಟೋ ಇದ್ದು, ಮನೆಯ ಒಳಗೆ ಪಾಲಿಶ್ ಮಾಡಿದ ಮರದ ನೆಲಹಾಸು ಇದೆ. ಇದರ ಮೇಲೆ ದುಬಾರಿ ಬೆಲೆ ಬಾಳುವ ಮ್ಯಾಟ್ ಹೊದಿಸಲಾಗಿದ್ದು, ಹೊರಗಡೆ ಸುಂದರ ಉದ್ಯಾನದ ಸೊಗಸನ್ನು ನಾಯಿ ನೋಡುವುದಕ್ಕಾಗಿ ಭವ್ಯ ಕಿಟಕಿ ಮಾಡಿಸಲಾಗಿದೆ. ಮಾತ್ರವಲ್ಲದೇ ಇದಕ್ಕಾಗಿ ಜಿಮ್‌ ಕೂಡ ನಿರ್ಮಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net