ಡಿಜೆಹಳ್ಳಿ ಗಲಭೆಕೋರರಿಂದ ನಷ್ಟ ವಸೂಲಿಗೆ ಹೈಕೋರ್ಟ್‌ನಿಂದ ಕ್ಲೇಮ್ ಕಮಿಷನರ್‌ ನೇಮಕ

DJhalli
Published on

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಹಿಂದೂ ದೇವತೆ ವಿರುದ್ಧ ಹಾಕಿದ್ದ ಪೋಸ್ಟ್‌ ಒಂದಕ್ಕೆ ಪ್ರತಿಯಾಗಿ ಪೈಗಂಬರ್‌ ವಿರುದ್ಧ ಹಾಕಿದ್ದ ಕಮೆಂಟ್‌ ಒಂದನ್ನೇ ನೆಪಮಾಡಿಕೊಂಡು ಇಡೀ ಡಿಜೆಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲಭೈರಸಂದ್ರದಲ್ಲಿ ಬೆಂಕಿ ಹಚ್ಚಿದ್ದ ದುಷ್ಕರ್ಮಿಗಳಿಂದಲೇ ಆಸ್ತಿಪಾಸ್ತಿ ನಷ್ಟವನ್ನು ವಸೂಲು ಮಾಡುವ ಬಗ್ಗೆ ಇದಾಗಲೇ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ.

ಉತ್ತರ ಪ್ರದೇಶದ ಮಾದರಿಯಲ್ಲಿಯೇ ಇಂಥ ಗಲಭೆಗಳು ನಡೆದಾಗ ಗಲಭೆಕೋರರಿಂದಲೇ ನಷ್ಟವನ್ನು ಭರ್ತಿ ಮಾಡುವ ಪದ್ಧತಿಗೆ ಕರ್ನಾಟಕ ಮುಂದಾಗಿದೆ. ಇದೀಗ ಮುಂದಿನ ಪ್ರಕ್ರಿಯೆಯಾಗಿ ಗಲಭೆ ವೇಳೆ ಸಾರ್ವಜನಿಕರ ಆಸ್ತಿಪಾಸ್ತಿ ಹಾಗೂ ವಾಹನಗಳನ್ನು ಹಾನಿ ಮಾಡಿದವರಿಂದಲೇ ನಷ್ಟ ಭರಿಸುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ಅವರನ್ನು ಕ್ಲೇಮ್ ಕಮೀಷನರ್ ಆಗಿ ಹೈಕೋರ್ಟ್ ನೇಮಿಸಿದೆ.

ಗಲಭೆ ಸಂದರ್ಭದಲ್ಲಿ ಸಾರ್ವಜನಿಕರ ಆಸ್ತಿ ಪಾಸ್ತಿಯಲ್ಲಿ ಎಷ್ಟು ನಷ್ಟವಾಗಿವೆ? ವಾಹನಗಳು ಎಷ್ಟು ಪ್ರಮಾಣದಲ್ಲಿ ಹಾನಿಯಾಗಿವೆ? ಇದರ ಮೌಲ್ಯ, ಒಟ್ಟು ನಷ್ಟದ ಅಂದಾಜು ಕುರಿತಂತೆ ತನಿಖೆ ನಡೆಸುವಂತೆ ಕೋರ್ಟ್‌ ಸೂಚನೆ ನೀಡಿದೆ.

ವಿಡಿಯೋ ಮೂಲಕ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳುವುದು ಹಾಗೂ ನ್ಯಾಯಾಲಯಕ್ಕೆ ಮಧ್ಯಂತರ ವರದಿಯನ್ನು ಸಲ್ಲಿಸಬೇಕೆಂದು ಕೋರ್ಟ್‌ ಇದೇ ವೇಳೆ ಹೇಳಿದೆ. ಕ್ಲೇಮ್‌ ಕಮಿಷನರ್‌ ಅವರಿಗೆ ಎಲ್ಲಾ ರೀತಿಯ ಸೌಕರ್ಯ, ಸಿಬ್ಬಂದಿ, ವಾಹನ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ಪೀಠ ಸರ್ಕಾರಕ್ಕೆ ಆದೇಶಿಸಿದೆ.

ಇದೇ ವೇಳೆ ತಮ್ಮ ಆಸ್ತಿ, ವಾಹನ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ತಿಳಿಸುವಂತೆ ಕೋರ್ಟ್‌ ಸರ್ಕಾರಕ್ಕೆ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net