ಡಿವೋರ್ಸ್‌ ಹೆಚ್ಚಳಕ್ಕೆ ಟ್ರಾಫಿಕ್‌ ಸಮಸ್ಯೆ ಕಾರಣ! ಮಾಜಿ ಮುಖ್ಯಮಂತ್ರಿ ಪತ್ನಿಯಿಂದ ಶಾಕಿಂಗ್‌ ಹೇಳಿಕೆ...

amrutha
Published on

ಮುಂಬೈ: ವಾಣಿಜ್ಯ ರಾಜಧಾನಿ ಮುಂಬೈ ಎಂದರೆ ಟ್ರಾಫಿಕ್‌ ಜಾಂ. ದಿನದ 24 ಗಂಟೆಯೂ ಇಲ್ಲಿ ಟ್ರಾಫಿಕ್‌ ಕಿರಿಕಿರಿ. ಅದಕ್ಕಾಗಿಯೇ ಮುಂಬೈಯನ್ನು ಎಂದಿಗೂ ನಿದ್ರಿಸದ ನಗರಿ ಎಂದೇ ಕರೆಯಲಾಗುತ್ತದೆ. ಇದರಿಂದಾಗಿಯೇ ಮಾಲಿನ್ಯ ವಿಪರೀತ ಮಟ್ಟಕ್ಕೆ ಏರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು ಎಲ್ಲರಿಗೂ ತಿಳಿದ ವಿಷಯವೇ.

ಆದರೆ ಈ ಟ್ರಾಫಿಕ್‌ ಕಿರಿಕಿರಿಯಿಂದ ಮುಂಬೈನಲ್ಲಿ ಡಿವೋರ್ಸ್ ಪ್ರಕರಣಗಳೂ ಹೆಚ್ಚುತ್ತಿವೆಯಂತೆ! ಹೀಗಂತ ಹೇಳಿದವರು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್.

"ನಾನು ಮಾಜಿ ಸಿಎಂ ಪತ್ನಿಯಾಗಿ ಅಲ್ಲ, ಬದಲಿಗೆ ಸಾಮಾನ್ಯ ನಾಗರಿಕಳಾಗಿ ಹೇಳುತ್ತಿದ್ದೇನೆ, ನಾನು ಒಮ್ಮೆ ಹೊರಗೆ ಹೋದಾಗ ಗುಂಡಿಗಳು, ಟ್ರಾಫಿಕ್ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತೇನೆ. ಟ್ರಾಫಿಕ್ ಕಾರಣ, ಜನರು ತಮ್ಮ ಕುಟುಂಬಗಳಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಪರಿಣಾಮ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ’ ಎಂದು ಹೇಳಿದ್ದಾರೆ.

ಮುಂಬೈನಲ್ಲಿ ಶೇ.3ರಷ್ಟು ವಿಚ್ಛೇದನಗಳು ಟ್ರಾಫಿಕ್​ ಸಮಸ್ಯೆಯಿಂದ ನಡೆಯುತ್ತಿವೆ ಎಂಬ ಅಂಕಿ ಅಂಶವನ್ನೂ ಅವರು ನೀಡಿದ್ದಾರೆ. ಜನಜೀವನದ ಮೇಲೆ ಟ್ರಾಫಿಕ್​ ಸಮಸ್ಯೆ ಭಾರಿ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಮುಂಬೈ ಮೇಯರ್‌ ಕಿಶೋರಿ ಪಡ್ನೇಕರ್‌, ಇದು ಬಾಲಿಶಃ ಹೇಳಿಕೆ ಎಂದು ಟೀಕಿಸಿದ್ದಾರೆ. ಟ್ರಾಫಿಕ್‌ ಸಮಸ್ಯೆಯಿಂದಾಗಿ ವಿಚ್ಛೇದನ ಪ್ರಕರಣ ಹೆಚ್ಚುತ್ತಿದೆ ಎನ್ನುವುದರಲ್ಲಿ ಯಾವುದೇ ಆಧಾರವಿಲ್ಲ. ಹಾಗೆಂದು ಟ್ರಾಫಿಕ್‌ ಸಮಸ್ಯೆ ಇಲ್ಲವೆಂದಲ್ಲ. ಆದರೆ ಹೆಚ್ಚುತ್ತಿರುವ ಡಿವೋರ್ಸ್‌ಗೂ ಟ್ರಾಫಿಕ್‌ಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net