

ನವದೆಹಲಿ: ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಹೊರತಾಗಿ ಈ ಬಾರಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬೇರೆಯವರಿಗೆ ಒಲಿಯಲಿದೆಯೇ ಎಂಬ ಪ್ರಶ್ನೆ ಕುತೂಹಲಕ್ಕೆ ಕಾರಣವಾಗಿದೆ. ಎರಡು ದಶಕಗಳ ನಂತರ ಗಾಂಧಿಯೇತರು ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದಾಗಲೇ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಂಸದ ಶಶಿ ತರೂರ್ ಈ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದಾರೆ. ಪಕ್ಷದ ಆಂತರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಶಶಿತರೂರ್ ಅವರಿಗೆ ಸೋನಿಯಾ ಗಾಂಧಿ ಇದಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಆಂತರಿಕ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಇವರಿಗೆ ಒಪ್ಪಿಗೆ ಸಿಕ್ಕಿದೆ.
2019ರ ಸಾರ್ವತ್ರಿಕ ಚುನಾವಣೆಯ ಸೋಲಿನ ನಂತರ ರಾಹುಲ್ ಗಾಂಧಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಪಕ್ಷದ ಸದಸ್ಯರು ಮತ್ತೆ ಅಧ್ಯಕ್ಷರಾಗುವಂತೆ ಒಪ್ಪಿಸಲು ಎಷ್ಟೇ ಪ್ರಯತ್ನಿಸಿದರೂ, ಆ ಎಲ್ಲಾ ಮನವಿಗಳನ್ನು ತಿರಸ್ಕರಿಸಿದ್ದರು. ಇದೀಗ ಅಧ್ಯಕ್ಷರ ರೇಸ್‍ನಲ್ಲಿ ಶಶಿ ತರೂರ್ ಮತ್ತು ಗೆಹ್ಲೋಟ್ ಹೆಸರು ಮುಂಚೂಣಿಯಲ್ಲಿದೆ.
ಇದರ ನಡುವೆಯೇ ಮತ್ತೋರ್ವ ಸ್ಪರ್ಧಿ ಕಣಕ್ಕಿಳಿದಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ತಮಗೆ ಒಪ್ಪಿಗೆ ಇರುವುದಾಗಿ ಸಂಸದ ದಿಗ್ವಿಜಯ ಸಿಂಗ್ ಸುಳಿವು ನೀಡಿದ್ದಾರೆ. ಸಂದರ್ಶನ ಒಂದರಲ್ಲಿ ಮಾತನಾಡಿರುವ ದಿಗ್ವಿಜಯ ಸಿಂಗ್, ಅಶ್ಯಕತೆವಿದ್ದರೆ ನಾನು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)