

ನವದೆಹಲಿ: ಗಣರಾಜ್ಯೋತ್ಸವ ದಿನದಂದು ರೈತರ ಸೋಗಿನಲ್ಲಿ ಟ್ರ್ಯಾಕ್ಟರ್ ಮೇಲೆ ಬಂದು ಹಿಂಸಾಚಾರ ನಡೆಸಿದ್ದ ಪ್ರಮುಖ ಆರೋಪಿ ನಟ, ಹೋರಾಟಗಾರ ದೀಪ್ ಸಿಧು ಸಿಕ್ಕಿಬಿದ್ದ ಬೆನ್ನಲ್ಲೇ ಇದೀಗ ಇನ್ನೋರ್ವ ಆರೋಪಿ ಇಕ್ಬಾಲ್ ಸಿಂಗ್ ಸಿಕ್ಕಿಬಿದ್ದಿದ್ದಾನೆ.
ಈತನನ್ನು ಹುಡುಕಿ ಕೊಟ್ಟವರಿಗೆ 50 ಸಾವಿರ ರೂಪಾಯಿ ನಗದು ಘೋಷಣೆ ಮಾಡಲಾಗಿತ್ತು. ಸದ್ಯ ಈತನ ಸುಳಿವು ಹೇಗೆ ಸಿಕ್ಕಿದೆ ಎಂಬ ಮಾಹಿತಿ ಬಹಿರಂಗಗೊಂಡಿಲ್ಲ. ಚಂಡೀಗಢ ಮತ್ತು ಅಂಬಾಲಾ ನಡುವಿನ ಜಿರಾಕ್‌ಪುರ ಪ್ರದೇಶದಲ್ಲಿ ದೀಪ್ ಸಿಧುವನ್ನು ನಿನ್ನೆ ಅರೆಸ್ಟ್ ಮಾಡಲಾಗಿತ್ತು. ಇದೀಗ ಸಿಂಗ್ ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಸಿಕ್ಕಿಬಿದ್ದಿದ್ದಾನೆ.
ನಟ ದೀಪ್ ಸಿಧು ಸೇರಿದಂತೆ ನಾಲ್ವರು ಆರೋಪಿಗಳನ್ನು ಪತ್ತೆ ಹಚ್ಚಲು ಸಹಾಯ ಮಾಡಿದವರಿಗೆ 1 ಲಕ್ಷ ರೂ ಹಾಗೂ ಇಕ್ಬಾಲ್ ಸಿಂಗ್ ಸೇರಿದಂತೆ ನಾಲ್ವರು ಆರೋಪಿಗಳ ಪತ್ತೆಗಾಗಿ ಪೊಲೀಸರು 50 ಸಾವಿರ ರೂ. ನಗದು ಪುರಸ್ಕಾರ ಘೋಷಣೆ ಮಾಡಿದ್ದಾರೆ. ಸದ್ಯ ಇಬ್ಬರು ಖದೀಮರು ಸಿಕ್ಕಿಬಿದ್ದಿದ್ದು, ಇನ್ನುಳಿದವರಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ರೈತರ ಪ್ರತಿಭಟನೆ ವೇಳೆ ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿದ್ದೂ ಅಲ್ಲದೇ ಪೊಲೀಸರ ಮೇಲೆ ಹಲ್ಲೆ ಮಾಡಿ ಹಿಂಸಾಚಾರಕ್ಕೆ ಇಳಿದಿರುವ ಆರೋಪ ಈ ಎಲ್ಲಾ ಆರೋಪಿಗಳ ಮೇಲಿದೆ.
ಕ್ಯಾಲಿಫೋರ್ನಿಯಾದಲ್ಲಿರುವ ಯುವತಿಯೊಬ್ಬಳ ಮೇಲೆ ಪೊಲೀಸರ ಕಣ್ಣು ನೆಟ್ಟಿದ್ದು, ಹಿಂಸಾಚಾರದಲ್ಲಿ ಸಹಾಯ ಮಾಡಿರುವ ಈಕೆಗಾಗಿಯೂ ಶೋಧ ಕಾರ್ಯ ನಡೆದಿದೆ. ಜತೆಗೆ ಉಳಿದ ಆರೋಪಿಗಳಿಗಾಗಿ ತಂಡ ರಚನೆ ಮಾಡಲಾಗಿದೆ.