

ನವದೆಹಲಿ: ಸಿಬಿಐ ದಾಳಿಯ ಸುದ್ದಿ ತಿಳಿಯುತ್ತಲೇ ಎಸ್ಕೇಪ್ ಆಗಿದ್ದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆಪ್ತ ವಿಜಯ್ ನಾಯರ್ ಕೊನೆಗೂ ಸಿಕ್ಕಿಬಿದ್ದಿದ್ದಾರೆ. ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರನ್ನು ಸಿಬಿಐ ಬಂಧಿಸಿದೆ. ಇವರು ಆಮ್ ಆದ್ಮಿ ಪಾರ್ಟಿಯ ಸಂವಹನ ಮುಖ್ಯಸ್ಥರೂ ಆಗಿದ್ದಾರೆ.
ಓನ್ಲಿ ಮಚ್ ಲೌಡರ್ ಎಂಟರ್ಟೇನ್ಮೆಂಟ್ ಮತ್ತು ಈವೆಂಟ್ ಮೀಡಿಯಾ ಕಂಪೆನಿಯ ಸಿಇಒ ಆಗಿದ್ದ ವಿಜಯ್ ನಾಯರ್ ಮುಖ್ಯ ಆರೋಪಿಯಾಗಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಅಬಕಾರಿ ನೀತಿ ಪ್ರಕರಣದಲ್ಲಿ ಇದೇ ಮೊದಲ ಬಂಧನವಾಗಿದೆ.
ಕಳೆದ ಆಗಸ್ಟ್ 19ರಂದು ಸಿಬಿಐ ದಾಳಿ ನಡೆಸುತ್ತಿದೆ ಎಂದು ತಿಳಿಯುತ್ತಲೇ ವಿಜಯ್ ನಾಪತ್ತೆಯಾಗಿದ್ದರು. ಇದೇ ಪ್ರಕರಣದಲ್ಲಿ ಕೊರ್ಟ್ ವಿಜಯ್ ಸೇರಿದಂತೆ ಎಂಟು ಆರೋಪಿಗಳಿಗೆ ಆಗಸ್ಟ್ 21ರಂದು ಲುಕ್‌ಔಟ್ ನೋಟಿಸ್ ನೀಡಿತ್ತು. ಇದೀಗ ಕೊನೆಗೂ ಅವರು ಸಿಕ್ಕಿಬಿದ್ದಿದ್ದಾರೆ.
ಸಿಬಿಐ ದಾಳಿ ಸಂದರ್ಭದಲ್ಲಿ ನಾನು ಪಲಾಯನ ಮಾಡಿರಲಿಲ್ಲ ಎಂದು ವಿಜಯ್ ನಾಯರ್ ಸ್ಪಷ್ಟನೆ ನೀಡಿದ್ದಾರೆ. ವೈಯಕ್ತಿಕ ಕೆಲಸದ ಕಾರಣಗಳಿಂದ ವಿಶ್ರಾಂತಿಯಲ್ಲಿದ್ದೆ, ಸಿಬಿಐನೊಂದಿಗೆ ಸಂಪರ್ಕದಲ್ಲಿದ್ದು ಎಲ್ಲ ರೀತಿಯಲ್ಲೂ ತನಿಖೆಗೆ ಸಹಕರಿಸುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್)