ಇಲ್ಲಿದ್ದಾರೆ ಸ್ನಾತಕೋತ್ತರ ಹಾಗೂ ಪದವೀಧರ ಭಿಕ್ಷುಕರು!

beggers
Published on

ಜೈಪುರ: ಈಗ ನಿರುದ್ಯೋಗ ಸಮಸ್ಯೆ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ಸ್ನಾತಕೋತ್ತರ ಪದವಿ ಸೇರಿದಂತೆ ಉನ್ನತ ವಿದ್ಯಾಭ್ಯಾಸ ಮಾಡಿರುವವರು ಚಿಕ್ಕಪುಟ್ಟ ನೌಕರಿ ಸಿಕ್ಕಾಗ ಹೋಗಲು ಹಿಂಜರಿಕೆ ಮಾಡುವ ಕಾರಣ, ಅಂಥದ್ದರಿಂದಲೇ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿರುವ ಬಗ್ಗೆ ಇದಾಗಲೇ ಸಾಕಷ್ಟು ಅಧ್ಯಯನ ವರದಿಗಳು ತಿಳಿಸಿವೆ.

ಅದೇ ಇನ್ನೊಂದೆಡೆ, ಯಾವುದೇ ಕೆಲಸವೂ ಸಿಗದೇ ಸ್ನಾತಕೋತ್ತರ ಪದವೀಧರರು, ಪದವೀಧರರು ಭಿಕ್ಷಾಟನೆಗೆ ಇಳಿದಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಭಿಕ್ಷಾವೃತ್ತಿಗೆ ಇಳಿದಿರುವವರ ಬಗ್ಗೆ ಪೊಲೀಸರು ಸಮೀಕ್ಷೆ ನಡೆಸಿದ್ದು, ಜೈಪುರದಲ್ಲಿರುವ 1,162 ಭಿಕ್ಷುಕರಲ್ಲಿ ಇಬ್ಬರು ಸ್ನಾತಕೋತ್ತರ ಮತ್ತು ಮೂವರು ಪದವೀಧರರು ಇರುವುದನ್ನು ಕಂಡುಹಿಡಿದಿದ್ದಾರೆ.

ಜೈಪುರವನ್ನು ಭಿಕ್ಷುಕರಿಂದ ಮುಕ್ತವಾಗಿ ಮಾಡುವುದು ಮತ್ತು ಅವರಿಗೆ ಕೆಲವು ಉದ್ಯೋಗ ಕೌಶಲವನ್ನು ನೀಡುವುದು, ಇತರರನ್ನು ಕೌಶಲರಹಿತ ಉದ್ಯೋಗಗಳಿಗೆ ಪರಿಚಯಿಸುವ ಉದ್ದೇಶದಿಂದ ಈ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ.

ಸಮೀಕ್ಷೆಯ ನಂತರ ಕಂಡುಬಂದಿರುವುದು ಏನೆಂದರೆ ಜೈಪುರದಲ್ಲಿ 825 ಭಿಕ್ಷಕರು ಅನಕ್ಷರಸ್ಥರು, 39 ಮಂದಿ ಅಕ್ಷರಸ್ಥರು ಮತ್ತು 193 ಜನ ಶಾಲೆಗೆ ಹೋಗಿದ್ದವರು ಸಿಕ್ಕಿದ್ದಾರೆ. ಸಮೀಕ್ಷೆಯ ಪ್ರಕಾರ, ಪದವೀಧರ ಭಿಕ್ಷುಕರು ಜೈಪುರದ ರಾಮ್ನಿವಾಸ್ ಬಾಗ್, ಸಿ-ಸ್ಕೀಮ್ ಮತ್ತು ವಾಲ್ಡ್ ಸಿಟಿಯಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ವಿದ್ಯಾವಂತ ಭಿಕ್ಷುಕರು ಅವಕಾಶ ನೀಡಿದರೆ ಗೌರವಯುತ ಜೀವನವನ್ನು ಕಟ್ಟಿಕೊಳ್ಳಲು ಸಿದ್ಧವಿದ್ದೇವೆ ಎಂದು ಹೇಳಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಅಕ್ಷರಸ್ಥ ಭಿಕ್ಷುಕರಲ್ಲಿ ಇಬ್ಬರು 32 ಮತ್ತು 35 ವರ್ಷದೊಳಗಿನವರು, ಇನ್ನಿಬ್ಬರು 50 ರಿಂದ 55 ವರ್ಷದೊಳಗಿನವರು ಮತ್ತು ಒಬ್ಬರು 65 ವರ್ಷ ವಯಸ್ಸಿನವರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಐದು ಉನ್ನತ ಮಟ್ಟದ ವಿದ್ಯಾವಂತ ಭಿಕ್ಷುಕರು ಹೋಟೆಲ್‍ಗಳು, ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಮತ್ತು ಇತರ ಕೌಶಲರಹಿತ ಉದ್ಯೋಗಗಳಲ್ಲಿ ಕೆಲಸ ಮಾಡಲು ಸಿದ್ಧವಿದ್ದೇವೆ ಎಂದು ಸರ್ವೇಯರ್ ಗಳಿಗೆ ತಿಳಿಸಿದ್ದಾರೆ. ಒಟ್ಟು ಭಿಕ್ಷುಕರಲ್ಲಿ ಕನಿಷ್ಠ 419 ಮಂದಿ ಜನರು ಈ ಕೆಲಸವನ್ನು ಬಿಟ್ಟು ಒಳ್ಳೆಯ ಜೀವನವನ್ನು ಕಟ್ಟಿಕೊಳ್ಳಲು ಸಿದ್ಧರಿದ್ದಾರೆ. 27 ಭಿಕ್ಷುಕರು ಅಧ್ಯಯನ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net