ನಿಗೂಢವಾಗ್ತಿದೆ ಪ್ರಯಾಗರಾಜ್ ಸಂತನ ಸಾವು- ಕೊಲೆಯೋ? ಆತ್ಮಹತ್ಯೆಯೋ? ಅಕ್ಷರ ಯಾರದ್ದು?

anandgiri
Published on

ಅಲಹಾಬಾದ್: ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಮಹಾಂತ್ ನರೇಂದ್ರ ಗಿರಿ ನಿನ್ನೆ (ಸೋಮವಾರ) ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈಗ ಪೊಲೀಸರಿಗೆ ಅವರೇ ಬರೆದಿದ್ದಾರೆ ಎನ್ನಲಾದ ಏಳೆಂಟು ಪುಟಗಳಷ್ಟು ಬರೆದಿರುವ ಡೆತ್ ನೋಟ್ ಸಿಕ್ಕಿದೆ.

‘ಇದುವರೆಗೆ ನಾನು ಹೆಮ್ಮೆಯಿಂದ ಬದುಕಿದ್ದೇನೆ, ಹೆಮ್ಮೆ ಇಲ್ಲದೆ ಬದುಕಲು ಸಾಧ್ಯವಿಲ್ಲ. ಹೀಗಾಗಿ ನನ್ನ ದಾರಿ ನಾನು ನೋಡಿಕೊಳ್ಳುತ್ತೇನೆ’ ಎಂದು ಆ ನೋಟ್‌ನಲ್ಲಿ ಬರೆಯಲಾಗಿದೆ. ಅದರಲ್ಲಿ ಶಿಷ್ಯ ಆನಂದ ಗಿರಿ ಸೇರಿದಂತೆ ಕೆಲವರ ಹೆಸರು ಉಲ್ಲೇಖವಾಗಿದೆ.

ಈ ಸಂಬಂಧ ಶಿಷ್ಯ ಆನಂದ ಗಿರಿ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರು ಕೆಲವೊಂದು ಮಾಹಿತಿ ನೀಡಿದ್ದು, ಇದೀಗ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಆನಂದ ಗಿರಿ ಹೇಳಿದ್ದೇನೆಂದರೆ, ‘ಡೆತ್‌ನೋಟ್‌ ಬರೆದಿರುವುದು ನನ್ನ ಗುರುವಲ್ಲ. ಬದಲಿಗೆ ಅದು ಯಾರೋ ಮಾಡಿರುವ ಷಡ್ಯಂತ್ರ. ಗುರೂಜಿ ಅವರಿಂದ ಕೆಲವು ಮಂದಿ ಹಣ ಪಡೆಯುತ್ತಿದ್ದರು. ಅವರು ಪತ್ರದಲ್ಲಿ ನನ್ನ ಹೆಸರು ಬರೆದಿದ್ದಾರೆ. ಗುರೂಜಿ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ. ಜೀವನದಲ್ಲಿ ಎಂದೂ ಪತ್ರಬರೆದವರಲ್ಲ, ಪತ್ರದಲ್ಲಿರುವ ಕೈ ಬರಹದ ಬಗ್ಗೆ ತನಿಖೆಯಾಗಬೇಕು’ ಎಂದು ಆಗ್ರಹಿಸಿದ್ದಾರೆ.

ಇದು ಪೊಲೀಸ್ ಅಧಿಕಾರಿಗಳು, ಭೂ ಮಾಫಿಯಾ ಈ ಪಿತೂರಿಯಲ್ಲಿ ಭಾಗಿಯಾಗಿದೆ. ತನಿಖೆಯಲ್ಲಿ ನಾನು ಪೊಲೀಸರಿಗೆ ಸಹಕರಿಸುತ್ತೇನೆ. ಗುರೂಜಿ ನನ್ನ ವಿರುದ್ಧ ಕೆರಳಿದ್ದರು. ನಾನು ತಪ್ಪಿತಸ್ಥನಾಗಿದ್ದರೆ ಶಿಕ್ಷೆಯನ್ನು ಎದುರಿಸಲು ನಾನು ಸಿದ್ಧ. ನಾನು 15 ದಿನಗಳ ಹಿಂದೆ ಗುರೂಜಿಯೊಂದಿಗೆ ಮಾತನಾಡಿದ್ದೆ ಎಂದು ಆನಂದ್ ಗಿರಿ ಹೇಳಿದ್ದಾರೆ.

’ನಾವು ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದೇವೆ. ವಿಧಿವಿಜ್ಞಾನ ಸಾಕ್ಷ್ಯವನ್ನು ಸಂಗ್ರಹಿಸುತ್ತಿದ್ದೇವೆ. ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸುತ್ತಿದ್ದೇವೆ. ಡೆತ್‌ನೋಟ್‌ ಜತೆಗೆ ಆಶ್ರಮದ ಬಗ್ಗೆ ಏನು ಮಾಡಬೇಕೆಂದು ವಿಲ್‌ ಕೂಡ ಬರೆದಿರುವುದು ಸಿಕ್ಕಿದೆ. ಇವುಗಳ ಆಧಾರದ ಮೇಲೆ ತನಿಖೆ ನಡೆಯಲಿದೆ’ ಎಂದು ಪ್ರಯಾಗ್ ರಾಜ್‌ನ ಹೆಚ್ಚುವರಿ ನಿರ್ದೇಶಕ ಎಡಿಜಿ ಪ್ರೇಮ್ ಪ್ರಕಾಶ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net