

ಜಮ್ಮು: 'ನಕ್ಸಲ್ ಅಂಕಲ್, ನಾನು ಅಪ್ಪನ ಪ್ರೀತಿಯ ಮಗಳು. ಅವರನ್ನು ತುಂಬಾ ಮಿಸ್ ಮಾಡ್ಕೊಳ್ತಿದ್ದೇನೆ. ಪ್ಲೀಸ್ ಅವರನ್ನು ಬಿಟ್ಟುಬಿಡಿ, ಅವರಿಗೆ ಏನೂ ಮಾಡಬೇಡಿ...’
ಛತ್ತೀಸ್‌ಗಡದಲ್ಲಿ ಮಾವೋವಾದಿಗಳಿಂದ ಅಪಹರಿಸಲ್ಪಟ್ಟ ಯೋಧ ರಾಕೇಶ್ವರ ಸಿಂಗ್ ಮನ್‌ಹಾಸ್ ಅವರ ಪುತ್ರಿ ಮಾಡಿಕೊಂಡ ಈ ಮನವಿ ಎಂಥ ಕಲ್ಲೆದೆಯವರನ್ನೂ ಕರಗಿಸುವಂತಿತ್ತು. ನಿನ್ನೆ ನಡೆದ ಗುಂಡಿನ ಕಾಳಗದ ಬಳಿಕ ಸಿಆರ್‌ಪಿಎಫ್ ಯೋಧ ರಾಕೇಶ್ವರ ಸಿಂಗ್ ನಾಪತ್ತೆಯಾಗಿದ್ದಾರೆ. ಬಳಿಕ ಅನಾಮಧೇಯ ವ್ಯಕ್ತಿಗಳು ಇವರ ಕುಟುಂಬದವರಿಗೆ ಕರೆ ಮಾಡಿ ತಾವು ಅವರನ್ನು ಅಪಹರಿಸಿರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಈ ಕರೆ ಸ್ವೀಕರಿಸುತ್ತಿದ್ದಂತೆಯೇ ಆಘಾತಕ್ಕೊಳಗಾಗಿರುವ ಕುಟುಂಬ ಕಣ್ಣೀರಿನಲ್ಲಿ ಮುಳುಗಿಹೋಗಿದೆ. ಈ ನಡುವೆ ಸಿಂಗ್ ಅವರ ಪುತ್ರಿ ರಾಘವಿ ಅಪ್ಪನ ಬಿಡುಗಡೆಗೆ ಕೋರಿಕೊಂಡಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಜಮ್ಮುವಿನಲ್ಲಿರುವ ಮನ್ಹಾಸ್ ನಿವಾಸದಲ್ಲಿ ತನ್ನ ತಂದೆಯ ಬಿಡುಗಡೆಗಾಗಿ ಈ ಮನವಿಯನ್ನು ಮಾಡಿಕೊಂಡಿದ್ದಾಳೆ. 'ಪಾಪಾ ಕಿ ಪರಿ ಪಾಪಾ ಕೋ ಬಹುತ್ ಮಿಸ್ ಕರ್ ರಹೀ ಹೈ. ಮೈ ಅಪ್ನೆ ಪಾಪಾ ಸೆ ಬಹುತ್ ಪ್ಯಾರ್ ಕರ್ತೀ ಹೂಂ. ಪ್ಲೀಸ್ ನಕ್ಸಲ್ ಅಂಕಲ್, ಮೇರೆ ಪಾಪಾ ಕೋ ಘರ್ ಭೇಜ್ ದೋ 'ಎಂದು (ಅಪ್ಪನ ಮುದ್ದಿನ ಮಗಳು ಅಪ್ಪನನ್ನು ಬಹಳ ಮಿಸ್ ಮಾಡಿಕೊಳ್ತಿದ್ದಾಳೆ. ನಾನು ಅಪ್ಪನನ್ನು ಬಹಳ ಪ್ರೀತಿಸುತ್ತೇನೆ. ಪ್ಲೀಸ್ ನಕ್ಸಲ್ ಅಂಕಲ್, ನನ್ನ ಅಪ್ಪನನ್ನು ಮನೆಗೆ ಕಳುಹಿಸಿ) ಎಂದು ರಾಘವಿ ನಕ್ಸಲರಿಗೆ ತನ್ನ ಮನವಿಯಲ್ಲಿ ಹೇಳಿದ್ದಾಳೆ.
ಚಿಕ್ಕಪ್ಪನ ಕಾಲ ಮೇಲೆ ಕುಳಿತ ರಾಘವಿ ಕಣ್ಣೀರು ಸುರಿಸಿ ಹೀಗೆ ಹೇಳುತ್ತಿದ್ದಂತೆಯೇ ಇಡೀ ಕುಟುಂಬದವರು ಕಣ್ಣೀರಿನಲ್ಲಿ ಮುಳುಗಿ ಹೋಗಿರುವುದು ವಿಡಿಯೋದಲ್ಲಿ ಕಾಣಬಹುದು. ಈ ಗುಂಡಿನ ಕಾಳಗದಲ್ಲಿ 22 ಮಂದಿ ಯೋಧರು ಹುತಾತ್ಮರಾಗಿದ್ದಾರೆ.