ಚುನಾವಣೆ ಸಮೀಪಿಸುತ್ತಲೇ ಪಂಜಾಬ್‌ ಸಿಎಂಗೆ ಭಾರಿ ಆಘಾತ- ಸೋದರಳಿಯನ ಮನೆ ಮೇಲೆ ಇಡಿ ದಾಳಿ

channi
Published on

ಚಂಡೀಗಢ: ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ಗೆ ಆಗಮಿಸಿದ್ದ ವೇಳೆ ಭದ್ರತಾಲೋಪ ಎಸಗಿ ಭಾರಿ ಟೀಕೆಗೆ ಒಳಗಾಗಿರುವ ಪಂಜಾಬ್‌ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಚೆನ್ನಿ ಅವರಿಗೆ ಅದಾದ ಮೇಲೆ ಒಂದರ ಮೇಲೊಂದರಂತೆ ಆಘಾತ ಶುರುವಾಗಿದೆ. ಭದ್ರತಾಲೋಪ ಎಸಗಿ ಕಾಂಗ್ರೆಸ್‌ ಸೇರಿದಂತೆ ಹಲವಾರು ಕಡೆಗಳಲ್ಲಿ ಟೀಕೆಗೆ ಒಳಗಾದ ಮೇಲೆ ಪ್ರಧಾನಿಯವರಿಗೆ ಖುದ್ದು ಕ್ಷಮೆ ಕೋರಿದ್ದರು ಚೆನ್ನಿ.

ಅದಾದ ಮೇಲೆ ಅವರ ಸಹೋದರನಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ ಕೊಡಿಸಲು ಮಾಡಿರುವ ಪ್ರಯತ್ನಗಳೆಲ್ಲಾ ನಿಷ್ಪ್ರಯೋಜ ಆದವು. ಇದರಿಂದ ಸಹೋದರ ಇವರ ವಿರುದ್ಧವೇ ತಿರುಗಿ ಬಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಅದೇನೆಂದರೆ ಇವರ ಸೋದರಳಿಯನ ಮನೆ ಮೇಲೆ ಜಾರಿ ನಿರ್ದೇಶನಾಯಲಯದ ಅಧಿಕಾರಿಗಳು ರೇಡ್‌ ಮಾಡಿದ್ದಾರೆ.

ಮೊಹಾಲಿ ಸೇರಿದಂತೆ ಪಂಜಾಬ್‍ನಲ್ಲಿ 10 ರಿಂದ 12 ಕಡೆ ಜಾರಿ ನಿರ್ದೇಶನಾಲಯವು ದಾಳಿ ನಡೆಸಿದೆ. ಅವುಗಳ ಪೈಕಿ ಅಕ್ರಮ ಮರಳು ದಂಧೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಭೂಪಿಂದರ್ ಸಿಂಗ್ ಹನಿ ಮನೆ ಮೇಲೆ ಈ ದಾಳಿ ನಡೆದಿದೆ.

ಪಂಜಾಬ್ನಲ್ಲಿ ಫೆಬ್ರವರಿ 14 ರಂದು ವಿಧಾನಸಭಾ ಚುನಾವಣೆ ನಡೆಯಬೇಕಿತ್ತು. ಆದರೆ ಗುರು ರವಿದಾಸ್ ಜಯಂತಿ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಒಟ್ಟಾಗಿ ಚುನಾವಣಾ ದಿನಾಂಕವನ್ನು ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಆಯೋಗ ಚುನಾವಣೆಯನ್ನು ಫೆ.20ಕ್ಕೆ ಮುಂದೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net