

ಇಂದೋರ್: ಐಎಎಸ್ ಅಧಿಕಾರಿಯೊಬ್ಬರು ತಮ್ಮ ಬಡ್ತಿಗಾಗಿ ಕೋರ್ಟ್ ನೀಡಿದೆ ಎಂಬ ಎರಡು ನಕಲಿ ಆದೇಶವನ್ನು ತಂದು ಸಿಕ್ಕಿಬಿದ್ದಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ.
ಭೂಪಾಲ್ನ ನಗರ ಆಡಳಿತ ಮತ್ತು ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಆಯುಕ್ತ ಸಂತೋಷ್ ವರ್ಮಾ ಈ ಕೃತ್ಯ ಎಸಗಿದ್ದು, ಪೊಲೀಸರು ಇವರನ್ನು ಬಂಧಿಸಿ ಜೈಲಿಗೆ ತಳ್ಳಿದ್ದಾರೆ. ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ನಡೆಸಿರುವ ಆರೋಪದಡಿ ಸಂತೋಷ್ ವಿರುದ್ಧ ಕೇಸು ದಾಖಲಾಗಿತ್ತು. ಕೋರ್ಟ್ನಲ್ಲಿ ಈ ಕೇಸ್ ಇನ್ನೂ ಇತ್ಯರ್ಥವಾಗಿರಲಿಲ್ಲ, ವಿಚಾರಣೆ ಬಾಕಿ ಇದ್ದ ಹಿನ್ನೆಲೆಯಲ್ಲಿ ಅವರಿಗೆ ಬಡ್ತಿ ಸಿಗುತ್ತಿರಲಿಲ್ಲ.
ಇದರಿಂದ ಏನಾದರೂ ಮಾಡಿ ಬಡ್ತಿ ಪಡೆಯಬೇಕು ಎಂದು ಯೋಚಿಸಿದ ಈ ಅಧಿಕಾರಿ ಖುದ್ದಾಗಿ ಎರಡು ನಕಲಿ ಆದೇಶ ತಯಾರು ಮಾಡಿದ್ದಾರೆ. ಒಂದು ಆದೇಶದಲ್ಲಿ ‘ಅಧಿಕಾರಿಯ ಮೇಲಿದ್ದ ಕ್ರಿಮಿನಲ್ ಆರೋಪಗಳನ್ನು ವಜಾಗೊಳಿಸಲಾಗಿದೆ’ ಎಂದು ಕೋರ್ಟ್ ತೀರ್ಪು ನೀಡಿದಂತೆ ಉಲ್ಲೇಖವಾಗಿದ್ದರೆ ಇನ್ನೊಂದರಲ್ಲಿ ‘ದೌರ್ಜನ್ಯಕ್ಕೊಳಗಾದ ಮಹಿಳೆ ಮತ್ತು ಅಧಿಕಾರಿ ನಡುವೆ ಸಂಧಾನ ಏರ್ಪಟ್ಟಿದ್ದು, ಪ್ರಕರಣ ಇತ್ಯರ್ಥಗೊಂಡಿದೆ’ ಎಂಬ ಉಲ್ಲೇಖವಿತ್ತು.
ಆದರೆ ಇವರು ಮಾಡಿದ ಒಂದು ಎಡವಟ್ಟು ಏನೆಂದರೆ ಈ ಆದೇಶವನ್ನು ಕೋರ್ಟ್ 2020ರ ಅಕ್ಟೋಬರ್ 6ರಂದು ನೀಡಿದೆ ಎಂದು ಅದರಲ್ಲಿ ಉಲ್ಲೇಖವಾಗಿತ್ತು. ಈ ಆದೇಶದ ಪ್ರತಿ ನೋಡಿದ ಮೇಲಧಿಕಾರಿಗಳಿಗೆ ಸಂದೇಹ ಬಂದಿತ್ತು. ಏಕೆಂದರೆ ಆ ದಿನ ಕೋರ್ಟ್ಗೆ ರಜವಿತ್ತು. ನಂತರ ಈ ಬಗ್ಗೆ ದೂರು ದಾಖಲಾದಾಗ ಜಿಲ್ಲಾ ನ್ಯಾಯಾಲಯದ ವಿಶೇಷ ನ್ಯಾಯಾಧೀಶರು ಪ್ರಕರಣವನ್ನು ಪರಿಶೀಲಿಸಿ ಇದು ನಕಲಿ ಆದೇಶವೆಂದು ಹೇಳಿದರು.
ವಿಚಾರಣೆ ನಡೆಸಿದಾದ ಮೋಸ ಮಾಡಿರುವುದು ಬೆಳಕಿಗೆ ಬಂದಿದ್ದು, ಪೊಲೀಸರು ಮತ್ತೊಂದು ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸಿದ್ದಾರೆ.